ಕೊಳ್ಳೇಗಾಲ ಪಟ್ಟಣದ ಡಿಸಿಎಫ್ ಕಚೇರಿ ಮುಂಭಾಗ ರೈತರು ಎದೆ ಮೇಲಿನ ಕಲ್ಲು ಇಟ್ಟುಕೊಂಡು ವಿನೂತನವಾಗಿ ಪ್ರತಿಭಟಿಸಿದರು. 
ಜಿಲ್ಲೆ

ಎದೆ ಮೇಲೆ ಕಲ್ಲು ಇಟ್ಟುಕೊಂಡು ಪ್ರತಿಭಟನೆ

26ನೇ ದಿನಕ್ಕೆ ಕಾಲಿಟ್ಟ ಧರಣಿ


ಕೊಳ್ಳೇಗಾಲ: ಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನನ್ನು ಮೀಸಲು ಅರಣ್ಯ ಪ್ರದೇಶ ಎಂಬ ಕಾರಣಕ್ಕಾಗಿ ಅರಣ್ಯ ಇಲಾಖೆ ಎರಡು ವರ್ಷದ ಹಿಂದೆ ವಶಕ್ಕೆ ಪಡೆದಿದ್ದು, ಅದನ್ನು ಬಿಟ್ಟುಕೊಡುವಂತೆ ಒತ್ತಾಯಿಸಿ ಬೂದಗಟ್ಟದೊಡ್ಡಿ ಗ್ರಾಮದ ರೈತರು ನಡೆಸುತ್ತಿರುವ ಪ್ರತಿಭಟನೆ ಗುರುವಾರ 25 ದಿನ ಪೂರೈಸಿತು.


ಈ ಸಂಬಂಧ ಆ.1 ರಿಂದ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರು, ಎದೆ ಮೇಲೆ ಕಲ್ಲು ಇಟ್ಟುಕೊಂಡು ಪಟ್ಟಣದ ಡಿಸಿಎಫ್ ಕಚೇರಿ ಮುಂದೆ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಸಾಗುವಳಿ ಮಾಡುತ್ತಿದ್ದ ಜಮೀನನ್ನು ಅರಣ್ಯ ಇಲಾಖೆಗೆ ಸೇರಿದ ಜಾಗವೆಂದು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸುಮಾರು 13 ಎಕರೆಯಷ್ಟು ಜಮೀನನ್ನು ವಶಕ್ಕೆ ಪಡೆದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ನ್ಯಾಯ ಸಿಗುವವರೆಗೂ ಧರಣಿ ಮುಂದುರಿಸಲಾಗುವುದು ಎಂದ ಪ್ರತಿಭಟನಾನಿರತ ರೈತರು ತೋಳಿಗೆ ಕಪ್ಪು ಪಟ್ಟಿಕೊಂಡು ಅರಣ್ಯಾಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಕಂಠಸ್ವಾಮಿ ಮಾತನಾಡಿ, ಸರ್ವೇ ನಂ.174ರಲ್ಲಿರುವ 12,764 ಎಕರೆ ಪೈಕಿ 4,500 ಎಕರೆಯಲ್ಲಿ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಆದರೆ ಅರಣ್ಯಾಧಿಕಾರಿಗಳು ರೈತರಿಗೆ ವ್ಯವಸಾಯ ಮಾಡಲು ತೊಂದರೆ ನೀಡುತ್ತಿದ್ದಾರೆ ಇದು ನಿಲ್ಲಬೇಕಿದೆ ಎಂದರು. ಧರಣಿ ನಿರತ ರೈತರ ವಿರುದ್ಧ ಅರಣ್ಯಾಧಿಕಾರಿಗಳು ಆ.7 ರಂದು ಪ್ರಕರಣ ದಾಖಲಿಸಿದ್ದು, ಇದನ್ನು ಹಿಂಪಡೆಯಬೇಕು. ಪ್ರಕರಣ ದಾಖಲಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮವಾಗಬೇಕು ಎಂದು ಒತ್ತಾಯಿಸಿದರು.


ಜಮೀನನ್ನು ಕಸಿದುಕೊಂಡಿರುವ ಸರ್ಕಾರ ಹಾಗೂ ಅರಣ್ಯ ಇಲಾಖೆ ರೈತರ ಎದೆ ಮೇಲೆ ಕಾಲು ಹಾಕುವ ಕೆಲಸ ಮಾಡುತ್ತಿದೆ. ಈ ಕೂಡಲೇ ಎಚ್ಚೆತ್ತು ವಶಕ್ಕೆ ಪಡೆದ ಜಮೀನನ್ನು ಬಿಟ್ಟುಕೊಡಬೇಕು. ಇಲ್ಲವಾದರೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.


ರೈತ ಮುಖಂಡ ಬಸವರಾಜು, ಗುರು ಮಲ್ಲಯ್ಯ, ಬಸವಣ್ಣ, ಜಾನ್‌ಸನ್, ಅಣ್ಣಮ್ಮ, ಪ್ರಕಾಶ್ ಮೇರಿ, ಜಪಮಾಲೈ ಮೇರಿ, ಜಾನ್ ಕೆನಡಿ, ಜಾನ್ ಪೀಟರ್, ಅಂತೋಣಿ ಸ್ವಾಮಿ ಮತ್ತಿತರಿದ್ದರು.