ಜಿಲ್ಲೆ

26ರಂದು ಗ್ರಾಪಂ ಮಟ್ಟದಲ್ಲಿ ಪಿಂಚಣಿ ದಿನ

ವಿಜಯಪುರ: ಪಿಂಚಣಿದಾರರು ತಮ್ಮ ಕುಂದು ಕೊರತೆ ನೋಂದಾಯಿಸಲು, ಪಿಂಚಣಿ ಕುರಿತ ಮಾಹಿತಿ ಪಡೆಯಲು, ಹಂಚಿಕೊಳ್ಳಲು ಹಾಗೂ ಪರಸ್ಪರ ಭೇಟಿಯಾಗಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೆ. 26ರಂದು ಬೆಳಗ್ಗೆ 11ಕ್ಕೆ ಪಿಂಚಣಿ ದಿನ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ತಿಳಿಸಿದ್ದಾರೆ.

ಜಿಲ್ಲೆಯ 13 ಗ್ರಾಮ ಪಂಚಾಯಿತಿಗಳಲ್ಲಿ ಪಿಂಚಣಿ ದಿನ ನಡೆಯಲಿದ್ದು, ವಿಜಯಪುರ ತಾಲೂಕು ವ್ಯಾಪ್ತಿಯ ಹಡಲಗಿ ಗ್ರಾಪಂ, ಬಬಲೇಶ್ವರ ತಾಲೂಕು ವ್ಯಾಪ್ತಿಯ ಬೋಳಚಿಕ್ಕಲಕಿ ಗ್ರಾಪಂ ಕಾರ್ಯಾಲಯದ ಸಭಾಭವನ, ತಿಕೋಟಾ ತಾಲೂಕಿನ ಕನಮಡಿ ಗ್ರಾಪಂ ಕಾರ್ಯಾಲಯ, ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಪಂ ಕಾರ್ಯಾಲಯ, ನಿಡಗುಂದಿ ಬೇನಾಳ ಆರ್.ಸಿ ಗ್ರಾಪಂ ಕಾರ್ಯಾಲಯ, ಕೊಲ್ಹಾರ ತಾಲೂಕಿನ ತಳೇವಾಡ ಗ್ರಾಪಂ ಕಾರ್ಯಾಲಯ, ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಆಯಾ ಗ್ರೇಡ್-2 ತಹಸೀಲ್ದಾರ್‌ಗಳು ನೇತೃತ್ವ ವಹಿಸಲಿದ್ದಾರೆ.

ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಪಂ ಕಾರ್ಯಾಲಯ, ಇಂಡಿ ತಾಲೂಕಿನ ಸಂಗೋಗಿ ಗ್ರಾಪಂ ಕಾರ್ಯಾಲಯ, ಚಡಚಣ ತಾಲೂಕಿನ ಲೋಣಿ ಬಿಕೆ ಗ್ರಾಪಂ ಕಾರ್ಯಾಲಯ, ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಪಂ ಕಾರ್ಯಾಲಯ, ದೇವರಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಪಂ ಹಾಗೂ ಆಲಮೇಲ ತಾಲೂಕಿನ ಕಡಣಿ ಗ್ರಾಪಂ ಕಾರ್ಯಾಲಯದಲ್ಲಿ ಪಿಂಚಣಿ ದಿನ ನಡೆಯಲಿದ್ದು, ಆಯಾ ಭಾಗದ ತಹಸೀಲ್ದಾರ್ ಇಲ್ಲವೇ ಗ್ರೇಡ್-2 ತಹಸೀಲ್ದಾರ್‌ಗಳು ಕಾರ್ಯನಿರ್ವಹಿಸಲಿದ್ದಾರೆ.

ಪಿಂಚಣಿದಾರರ ಪೂರ್ಣ ಪ್ರಮಾಣದ ಮಾಹಿತಿಯೊಂದಿಗೆ ಆಯಾ ಗ್ರಾಪಂ ಆಡಳಿತಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಅಂಚೆ ಕಚೇರಿಯ ಸಿಬ್ಬಂದಿ ಹಾಜರಿರಬೇಕು. ಗಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.