ಧಾರವಾಡ: ಜಿಲ್ಲೆಯಲ್ಲಿ ಬುಧವಾರ 269 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 6668ಕ್ಕೇರಿದೆ. 234 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈವರೆಗೆ ಗುಣವಾದವರ ಸಂಖ್ಯೆ 4187. ಒಟ್ಟು 2273 ಪ್ರಕರಣಗಳು ಸಕ್ರಿಯವಾಗಿವೆ. 33 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಧವಾರ ಇಬ್ಬರು ಮೃತಪಟ್ಟಿದ್ದಾರೆ. ಕರೊನಾದಿಂದ ಸಾವಿಗೀಡಾದವರ ಸಂಖ್ಯೆ 208ಕ್ಕೆ ಏರಿದೆ.
ಪ್ರಯೋಗಾಲಯ ವರದಿಯಲ್ಲಿ ಯಥಾಪ್ರಕಾರ ಹುಬ್ಬಳ್ಳಿಯದ್ದೇ ಸಿಂಹಪಾಲು. ಹುಬ್ಬಳ್ಳಿ ಶಹರ ಹಾಗೂ ತಾಲೂಕಿನ ಗ್ರಾಮಾಂತರ ಸೇರಿ ಸುಮಾರು 70 ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ.
ಧಾರವಾಡ ಹಾಗೂ ತಾಲೂಕಿನ ಗ್ರಾಮಾಂತರ ಸೇರಿ 50 ಪ್ರದೇಶಗಳಲ್ಲಿ ಸೋಂಕಿತರು ಕಂಡುಬಂದಿದ್ದಾರೆ. ಕೆಲ ಪ್ರದೇಶಗಳಲ್ಲಿ ನಿತ್ಯವೂ ಒಂದಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವುದು ಜನರಲ್ಲಿ ಭಯ ಮೂಡಿಸಿದೆ.
ಕಲಘಟಗಿ ತಾಲೂಕಿನ ಕುದ್ಲಗಿ ಹನುಮಂತ ದೇವಸ್ಥಾನ ಬಳಿ; ನವಲಗುಂದ ತಾಲೂಕಿನ ವಡ್ಡರ ಓಣಿ, ಅಳಗವಾಡಿಯ ಪೂಜಾರ ಓಣಿ, ಅರೇಕುರಹಟ್ಟಿ, ನಾಯಕನೂರ ಗ್ರಾಮದ ಬಸವೇಶ್ವರ ನಗರ, ನಾವಳ್ಳಿಯ ಅಗಸಿ ಓಣಿ, ತುಪ್ಪದ ಕುರಟ್ಟಿ ಅಂಬೇಡ್ಕರ್ ನಗರ, ಗುಡಿ ಓಣಿ, ದಾಟನಾಳದ ಕುಂಬಾರ ಓಣಿ, ಹನುಮನ ಗುಡಿ ಹತ್ತಿರ, ಶಲವಡಿ ಗ್ರಾಮದ ಹಸಬಿ ಓಣಿ, ಬೆನ್ನೂರ, ಅಮರಗೋಳದ ಶಂಕರಲಿಂಗ ಓಣಿ, ಬೆಳವಟಗಿ, ಹೆಬ್ಬಾಳ; ಅಣ್ಣಿಗೇರಿಯ ಹೊಸಪೇಟೆ ಓಣಿ, ನವಲಗುಂದ ಓಣಿ; ಕುಂದಗೋಳ ತಾಲೂಕಿನ ಹಂಚಿನಾಳ, ಚಿಕ್ಕನರ್ತಿ, ಕಮಡೊಳ್ಳಿಯ ದ್ಯಾಮವ್ವನ ಗುಡಿ ಹತ್ತಿರ; ಅಳ್ನಾವರದ ಅಶೋಕ ನಗರ, ಡೋರಿ ಗ್ರಾಮಗಳಲ್ಲಿ ಪ್ರಕರಣ ಪತ್ತೆಯಾಗಿವೆ. ಉತ್ತರ ಕರ್ನಾಟಕದ ಇತರ ಜಿಲ್ಲೆಗಳ ಏಳೆಂಟು ಜನರು ಧಾರವಾಡ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಆಸ್ಪತ್ರೆಯಿಂದ ತಪ್ಪಿಸಿಕೊಂಡ ಸೋಂಕಿತ ?
ಅಳ್ನಾವರ: ಕರೊನಾ ಸೋಂಕಿತ ವ್ಯಕ್ತಿಯೋರ್ವನನ್ನು ಆಂಬುಲೆನ್ಸ್ನಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲಿಸಿದ ಮರುದಿನವೇ ಆತ ಮತ್ತೆ ಮನೆ ಸೇರಿದ ಘಟನೆ ಜರುಗಿದೆ. ಈತ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ನಿಯಮಿತವಾಗಿ ಡಯಾಲಿಸಿಸ್ಗೆ ಒಳಗಾಗುತ್ತಿದ್ದ. ಕಳೆದ 8 ದಿನಗಳ ಹಿಂದಷ್ಟೇ ಈತನ ಗಂಟಲ ದ್ರವ ಸಂಗ್ರಹಿಸಲಾಗಿತ್ತು. ಮುಂದೆ ಆಂಟಿಜನ್ ಟೆಸ್ಟ್ನಲ್ಲಿ ವರದಿ ನೆಗಟಿವ್ ಬಂದಿತ್ತು. ಆದರೂ ಮುಂದೆ ಸ್ವಾ್ಯಬ್ ಟೆಸ್ಟ್ ನಲ್ಲಿ ಪಾಸಿಟಿವ್ ಎಂದು ಬರುತ್ತದೆ ಎಂದು ಆಸ್ಪತ್ರೆ ಸಿಬ್ಬಂದಿ ಆತನನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ಮರುದಿನ ಆತನಿಗೆ ಕೇವಲ ಡಯಾಲಿಸಿಸ್ ಮಾಡಿ ಹಾಗೆಯೇ ಬಿಡಲಾಗಿತ್ತು. ಆತ ತನಗೆ ಕರೊನಾ ತಗುಲಿಲ್ಲ ಎಂದುಕೊಂಡು ಸ್ವಗ್ರಾಮಕ್ಕೆ ಮರಳಿದ್ದಾನೆ. ಈ ಕುರಿತು ತಹಸೀಲ್ದಾರ್ ಅಮರೇಶ ಪಮ್ಮಾರ ಅವರನ್ನು ವಿಚಾರಿಸಿದಾಗ, ‘ಆತನಿಗೆ ಪಾಸಿಟಿವ್ ಬಂದಿದೆ. ಆದರೂ ಜಿಲ್ಲಾಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾನೆ’ ಎಂದು ತಿಳಿಸಿದರು. ಘಟನೆಯಿಂದ ಸ್ಥಳೀಯರು ಭಯಗೊಂಡಿದ್ದು, ಆತ ಸೋಂಕಿತನೋ ಅಲ್ಲವೋ ಎಂಬುದನ್ನು ಜಿಲ್ಲಾಸ್ಪತ್ರೆ ಸ್ಪಷ್ಟಪಡಿಸಬೇಕಿದೆ.