ಭಾಲ್ಕಿ: ಸಂಸ್ಕಾರಯುತ ಮಕ್ಕಳೇ ದೇಶದ ಬಹುದೊಡ್ಡ ಆಸ್ತಿ ಮತ್ತು ಆಧಾರಸ್ತಂಭ ಇದ್ದಂತೆ ಎಂದು ಬಿಆರ್‌ಸಿ ಮನೋಹರ ಹೋಳಕರ್ ಹೇಳಿದರು.
ಮದಕಟ್ಟಿ-ಬಾಜೋಳಗಾ(ಕೆ) ಕ್ರಾಸ್‌ನ ವಿದ್ಯಾಚೇತನ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ೨೦ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅವರು, ಮಕ್ಕಳು ಉನ್ನತ ಕನಸುಗಳನ್ನು ಕಾಣುವುದರ ಜತೆಗೆ ನನಸಾಗಿಸಲು ನಿರಂತರ ಪ್ರಯತ್ನ ಮಾಡಬೇಕು ಎಂದರು.
ನಿವೃತ್ತ ಪ್ರಾಚಾರ್ಯ ಅಶೋಕ ರಾಜೋಳೆ ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಪಾಲಕರು ತಮ್ಮ ಜವಾಬ್ದಾರಿ ಅರಿತು ಮಕ್ಕಳಿಗೆ ಸಂಸ್ಕಾರಭರಿತ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ರೇವಪಯ್ಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸುಭಾಷ ಹುಲಸೂರೆ ಮಾತನಾಡಿ, ಸಂಸ್ಥೆ ಬೆಳವಣಿಗೆಯಲ್ಲಿ ಪಾಲಕ-ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಶಾಲೆ ಗ್ರಾಮೀಣ ಭಾಗದಲ್ಲಿದ್ದರೂ ವಿದ್ಯಾರ್ಥಿಗಳ ವಿಕಾಸಕ್ಕಾಗಿ ಸಕಲ ಮೂಲಸೌಕರ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಪಟವಾದಿ ಅಧ್ಯಕ್ಷತೆ ವಹಿಸಿದ್ದರು. ಮದಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಖಂಡಾಳೆ, ಸಿಆರ್‌ಸಿ ಚನ್ನಪ್ಪ, ಪ್ರಮುಖರಾದ ಮಲ್ಲಿಕಾರ್ಜುನ ಹಲಮಂಡಗೆ, ತಿಪ್ಪಣ್ಣ ಶಿವಪುರೆ, ಬಾಲಾಜಿ ತುಕದೆ, ಡಾ.ಮಹೇಶ ಭಾಲ್ಕೆ, ಜ್ಯೋತಿಬಾ ಸಾಳುಂಕೆ, ಬಸವರಾಜ ರಂಜೇರೆ, ಭಾನುದಾಸ ಕಾರಬಾರಿ, ಜಗನ್ನಾಥ ಪನಶೆಟ್ಟಿ, ಸಚಿನ್ ಬಿರಾದಾರ, ಶ್ರೀಕಾಂತ ಸ್ವಾಮಿ, ಅನೀಲ ಬಿರಾದಾರ, ಜಗನ್ನಾಥ ಸ್ವಾಮಿ, ಶೋಭಾ ಹುಲಸೂರೆ, ಮಾರುತಿರಾವ ಬಿರಾದಾರ, ಸಂಗಪ್ಪ ಖೋಬಣ್ಣ ಇತರರಿದ್ದರು.
ಶಿಕ್ಷಕರಾದ ಶರಣು ಕರಂಜೆ, ಸವಿತಾ ಜಗತಾಪ ನಿರೂಪಣೆ ಮಾಡಿದರು. ವಿದ್ಯಾಚೇತನ ಶಾಲೆ ಮುಖ್ಯಗುರು ಶಾಂತಕುಮಾರ ವಂದಿಸಿದರು. ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು. ರಾಜ್ಯ ಸರ್ಕಾರಿ ನೌಕರ ಸಂಘದ ನಿರ್ದೇಶಕರಾದ ನಿರಂಜಪ್ಪ ಪಾತ್ರೆ, ಬಸವರಾಜ ದಾನಾ, ಮದಕಟ್ಟಿ ಶಾಲೆ ಮುಖ್ಯಗುರು ವಿಜಯಕುಮಾರ ಹುಡಗೆ, ಸುಧೀರ ಸಂತಪುರೆ, ವಿಶಾಲಾಕ್ಷಿ ಅವರನ್ನು ಸನ್ಮಾನಿಸಲಾಯಿತು.