ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ದಕ್ಷಿಣ ಉಪ ವಿಭಾಗ ವ್ಯಾಪ್ತಿಯಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿ ಅಗತ್ಯ ಮತ್ತು ಸೂಕ್ತ ದಾಖಲೆಗಳು ಇಲ್ಲದ 264 ದ್ವಿಚಕ್ರ ವಾಹನ ಹಾಗೂ 3 ಆಟೋಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ನಗರ, ಘಂಟಿಕೇರಿ, ಕಸಬಾಪೇಟ, ಹಳೇ ಹುಬ್ಬಳ್ಳಿ ಹಾಗೂ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ 14 ಸ್ಥಳಗಳಲ್ಲಿ ಚೆಕ್ ಪೋಸ್ಟ್ ಹಾಕಿ ದ್ವಿಚಕ್ರ ವಾಹನಗಳ ದಾಖಲೆಗಳನ್ನು ಪರಿಶೀಲಿಸುವ ಕಾರ್ಯಾಚರಣೆ ನಡೆಸಲಾಗಿತ್ತು. ತಪಾಸಣೆ ವೇಳೆ ಸೀಜ್ ಮಾಡಿದ ಬಳಿಕ ದಾಖಲೆಗಳನ್ನು ಹಾಜರು ಪಡಿಸಿದವರಿಗೆ ವಾಹನಗಳನ್ನು ಬಿಟ್ಟು ಕೊಟ್ಟಿದ್ದೇವೆ. ಉಳಿದವನ್ನು ವಶಪಡಿಸಿಕೊಂಡಿದ್ದೇವೆ. ಇದರಲ್ಲಿ ನಂಬರ್ ಪ್ಲೇಟ್ ಇಲ್ಲದ, ಕನಿಷ್ಠ ಒಂದು ದಾಖಲೆಯೂ ಇಲ್ಲ ದ್ವಿಚಕ್ರ ವಾಹನಗಳು ಸಾಕಷ್ಟು ಇದ್ದಾವೆ ಎಂದರು.
ನಾಗರಿಕ ದಿನಚರಿಗೆ ಅಡ್ಡಿಯಾಗುವ ರೀತಿಯಲ್ಲಿ ದ್ವಿಚಕ್ರ ವಾಹನಗಳನ್ನು ಚಲಾಯಿಸುವ, ಸಂಚಾರ ನಿಯಮ ಉಲ್ಲಂಘನೆ, ಅತಿ ವೇಗದ ಚಾಲನೆ ಬಗ್ಗೆ ಇತ್ತೀಚೆಗೆ ಸಾರ್ವಜನಿಕರು ದೂರಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ್ದೇವೆ. ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ಸರಗಳ್ಳತನ, ಚೂರಿ ಇರಿತ, ಹೆಣ್ಣು ಮಕ್ಕಳಿಗೆ ಕೀಟಲೆ ಕೊಡಲು ಬಳಕೆ ಮಾಡಲಾಗುತ್ತದೆ. ಇದನ್ನೆಲ್ಲ ತಡೆಗಟ್ಟಬೇಕಿದೆ ಎಂದು ಹೇಳಿದರು.
ಸಂಚಾರ ನಿಯಮ ಉಲ್ಲಂಘನೆಗೆ ದಂಡ ಕಟ್ಟುವುದು ಸುಲಭವಾಗಿದೆ. ವಶಕ್ಕೆ ಪಡೆದ ವಾಹನಗಳ ಮೇಲೆ ಪ್ರಕರಣ ಸಹ ದಾಖಲು ಮಾಡಲಾಗುವುದು. ನಿಯಮಾವಳಿ ಪ್ರಕಾರವೇ ವಾಹನಗಳನ್ನು ನ್ಯಾಯಾಲಯದಲ್ಲಿ ಬಿಡಿಸಿಕೊಳ್ಳಬೇಕು. ಶನಿವಾರ ಮೊದಲ ಹಂತದ ಕಾರ್ಯಾಚರಣೆ ಮಾಡಲಾಗಿದೆ. ಮುಂದೆಯೂ ಕಾರ್ಯಾಚರಣೆ ಮುಂದುವರಿಯಲಿದೆ. ವಾಹನಕ್ಕೆ ಸಂಬಂಧಿಸಿದ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡುತ್ತೇವೆ. ಡಿಜಿ ಲಾಕರ್ನಲ್ಲೂ ನಮಗೆ ದಾಖಲೆಗಳನ್ನು ಪ್ರದರ್ಶಿಸಲು ಅವಕಾಶ ಇರುತ್ತದೆ ಎಂದು ಹೇಳಿದರು.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಹಿಳೆಯರು, ಹೆಣ್ಣುಮಕ್ಕಳು ಮಾರುಕಟ್ಟೆ, ಶಾಪಿಂಗ್, ದೇವಸ್ಥಾನಗಳಿಗೆಂದು ಮನೆಯಿಂದ ಹೊರಗೆ ಹೋಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಮಹಿಳಾ ಮತ್ತು ಹೆಣ್ಣು ಮಕ್ಕಳ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆ ಮಾಡಲಾಗಿದೆ ಎಂದರು.</p><p>ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿ ಗಳಾದ ರವೀಶ ಸಿ.ಆರ್., ಮಹಾನಿಂಗ ನಂದಗಾವಿ, ಎಸಿಪಿಗಳಾದ ಉಮೇಶ ಚಿಕ್ಕಮಠ ಹಾಗೂ ಶಿವಪ್ರಕಾಶ ನಾಯ್ಕ ಶನಿವಾರ ರಾತ್ರಿ ಬೈಕ್ ನಲ್ಲಿ ನೈಟ್ ಪೆಟ್ರೋಲಿಂಗ್ ನಡೆಸಿದ್ದರು.