ಜಿಲ್ಲೆ

26 ರಿಂದ ಬೆಂಗಳೂರಿನಲ್ಲಿ ಮಹಾ ಧರಣಿ

ಮದ್ದೂರು: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು, ಪರ್ಯಾಯ ನೀತಿಗಳಿಗಾಗಿ ನ.26 ರಿಂದ 28ರವರೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ 72 ಗಂಟೆಗಳ ಕಾಲ ಮಹಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಶೋಭಾ ಹೇಳಿದರು.


ತಾಲೂಕಿನ ಬೆಸಗರಹಳ್ಳಿ ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ನ 26 ರಿಂದ 28ರವರೆಗೆ ನಡೆಯುವ ಮಹಾ ಧರಣಿಯ ಪ್ರಚಾರ ಆಂದೋಲನ ಹಾಗೂ ಬಹಿರಂಗ ಸಭೆಯಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.


ಕೇಂದ್ರ ಸರ್ಕಾರ ನಿರಂತರವಾಗಿ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ರೈತ, ಕಾರ್ಮಿಕ ಹಾಗೂ ಕೂಲಿಕಾರರ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಮಹಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.


ಎಂ.ಎಸ್.ಸ್ವಾಮಿನಾಥನ್ ವರದಿ ಅನುಷ್ಠಾನ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಬಲಪಡಿಸಿ ಹಾಗೂ ನಗರ ಪ್ರದೇಶಗಳಿಗೂ ವಿಸ್ತರಿಸಿ ಕೂಲಿಯ ದಿನಗಳನ್ನು 200 ದಿನಕ್ಕೆ ಏರಿಸಿ, 600ರೂ. ಕೂಲಿಯನ್ನು ನಿಗದಿ ಮಾಡಬೇಕು. ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕು. ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.


ಆಹಾರ ಭದ್ರತೆ, ಪೋಷಕಾಂಶ ಸುರಕ್ಷತೆಯನ್ನು ಖಾತ್ರಿಪಡಿಸಬೇಕು. ಉಚಿತ ಶಿಕ್ಷಣ, ಉಚಿತ ಆರೋಗ್ಯ, ಉಚಿತ ನೀರು ನೈರ್ಮಲ್ಯ ಸಿಗುವಂತೆ ಮಾಡಬೇಕು. ಎಲ್ಲ ಸಾರ್ವಜನಿಕ ಉದ್ದಿಮೆಗಳ ಖಾಸಗಿಕರಣ ನಿಲ್ಲಬೇಕು. ಅಕ್ಷರ ದಾಸೋಹ, ಆಶಾ ಮುಂತಾದ ಯೋಜನೆಗಳನ್ನು ಯಾವುದೇ ಸ್ವರೂಪದಲ್ಲಿ ಖಾಸಗೀಕರಣ ಮಾಡಬಾರದು. ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಸಮರ್ಪಕವಾಗಿ ಜಾರಿ ಮಾಡಬೇಕು ಎಂದು ಆಗ್ರಹಸಿದರು.


ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ಪಣ್ಣೆದೊಡ್ಡಿ ವೆಂಕಟೇಶ, ಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯ ಬಿ.ಎ.ಮಧುಕುಮಾರ, ಮುಖಂಡರಾದ ಕೀಳಘಟ್ಟ ರಾಜಣ್ಣ, ಶಾಂತಮ್ಮ, ನಂಜಮ್ಮ, ಜಯಶೀಲ, ಜಯರತ್ನ, ಮಹದೇವಮ್ಮ, ಮಂಜುಳಾ, ವೆಂಕಟೇಶ್, ಹೋರಾಟಗಾರ ಬೆಸಗರಹಳ್ಳಿ ಶ್ರೀನಿವಾಸ್, ಕೃಷ್ಣಪ್ಪ ಸೇರಿದಂತೆ ಇತರರಿದ್ದರು.