ಜಿಲ್ಲೆ

ಅತ್ಯಾಚಾರದ ಅಪರಾಧಿಗೆ 26 ವರ್ಷ ಸಜೆ: ಅಧಿಕ ಸೆಷನ್ಸ್ ಮತ್ತು 2ನೇ ತ್ವರಿತಗತಿ ನ್ಯಾಯಾಲಯದಿಂದ ತೀರ್ಪು

ಕೆ.ಎನ್.ರಾಘವೇಂದ್ರ

ಮಂಡ್ಯ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ 26 ವರ್ಷ ಕಾರಾಗೃಹ ಶಿಕ್ಷೆ ಹಾಗೂ 1.30 ಲಕ್ಷ ರೂ ದಂಡ ವಿಧಿಸಿ ಮಂಡ್ಯ ಅಧಿಕ ಸೆಷನ್ಸ್ ಮತ್ತು 2ನೇ ತ್ವರಿತಗತಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಬಿ.ದಿಲೀಪ್‌ಕುಮಾರ್ ಅವರು ತೀರ್ಪು ನೀಡಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನ ಅಪ್ಪು ಅಲಿಯಾಸ್ ಅಪ್ಪುಗೌಡ (23) ಶಿಕ್ಷೆಗೊಳಗಾದ ಅಪರಾಧಿ. ಅಪ್ರಾಪ್ತೆ ಕಾಲೇಜಿಗೆ ಹೋಗುವಾಗ ಮತ್ತು ಬರುವಾಗ ಈತ ಆಕೆಯನ್ನು ಪರಿಚಯ ಮಾಡಿಕೊಂಡು, ಮದುವೆಯಾಗುವುದಾಗಿ ಫುಸಲಾಯಿಸಿದ್ದನು. ಆದಾಗ್ಯೂ ಆಕೆ ನನಗೆ ಇನ್ನೂ ಮದುವೆ ವಯಸ್ಸಾಗಿಲ್ಲ ಎಂದು ಹೇಳಿದರೂ, ಮದುವೆ ಮಾಡಿಕೊಂಡರೆ ಯಾರೂ ಕೇಳುವುದಿಲ್ಲ ಎಂದು ನಂಬಿಸಿ ಹೊರಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದನು.

ಈ ಸಂಬಂಧ ಬಾಲಕಿ ಕಾಣೆಯಾಗಿರುವ ಬಗ್ಗೆ ಆಕೆಯ ತಂದೆ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ 2022ರ ಜ.27ರಂದು ದೂರು ದಾಖಲಿಸಿದ್ದರು. ಅಂದಿನ ಇನ್‌ಸ್ಪೆಕ್ಟರ್ ಎಂ.ಕೆ.ದೀಪಕ್ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಅಂತೆಯೇ ವಿಚಾರಣೆ ನಡೆಸಿದ ನ್ಯಾಯಾಧೀಶರು, ಅಪರಾಧಿಗೆ ತೀರ್ಪು ನೀಡಿದ್ದಾರೆ. ಅಭಿಯೋಜನೆ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದ್ದರು.