ಜಿಲ್ಲೆ

27 ಹುದ್ದೆಯಲ್ಲಿ 26 ಖಾಲಿ

Manikya M

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ 58 ಗ್ರಾಮ ಪಂಚಾಯಿತಿ, 84 ಗ್ರಾಮಗಳು, ಮೂರು ರೈತ ಸಂಪರ್ಕ ಕೇಂದ್ರಗಳು ಇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಕೃಷಿ ಇಲಾಖೆಗೆ ಸಂಬಂಧಿಸಿ ಅತಿದೊಡ್ಡ ತಾಲೂಕು ಎಂದು ಗುರುತಿಸಲಾದ ಬಂಟ್ವಾಳಕ್ಕೆ ಸಹಾಯಕ ಕೃಷಿ ನಿರ್ದೇಶಕರ ಸಹಿತ ಕಾಯಂ ಅಧಿಕಾರಿಗಳ ಕೊರತೆ ಇದೆ. ಇರಬೇಕಾದದ್ದು ಇಪ್ಪತ್ತೇಳು ಅಧಿಕಾರಿಗಳು ಆದರೆ ಇರೋದು ಒಬ್ಬರು ಮಾತ್ರ.

ಬಂಟ್ವಾಳ ತಾಲೂಕಿನಲ್ಲಿ ಫಲಾನುಭವಿಗಳ ಆಯ್ಕೆಯಿಂದ ತೊಡಗಿ, ತಾಲೂಕು ಮಟ್ಟದ ಸಭೆಯಿಂದ ಮೊದಲ್ಗೊಂಡು, ಗ್ರಾಮಸಭೆಗಳವರೆಗೆ ಜನಪ್ರತಿನಿಧಿಗಳ, ಸಾರ್ವಜನಿಕರ ದೂರು, ಆಕ್ರೋಶ, ಟೀಕೆಗಳಿಗೆ ಕಿವಿಯಾಗಬೇಕು. ಇಡೀ ತಾಲೂಕಿನ ಕೃಷಿಗೆ ಸಂಬಂಧಿಸಿದ ಕೆಲಸ ಕಾರ್ಯಗಳು, ಲೆಕ್ಕಪತ್ರಗಳನ್ನು ನಿರ್ವಹಿಸುವುದು, ಕಚೇರಿಗೆ ಬಂದವರ ಸಮಸ್ಯೆಗಳನ್ನು ಆಲಿಸಬೇಕು. ಬಂಟ್ವಾಳ ತಾಲೂಕಿನಲ್ಲಿ 2022ರಿಂದ ಸಹಾಯಕ ಕೃಷಿ ನಿರ್ದೇಶಕರು ವರ್ಗವಾದ ಬಳಿಕ ಬದಲಿ ಅಧಿಕಾರಿ ಬಂದಿಲ್ಲ. ಈಗ ನಿಯೋಜನೆ ಮೇಲೆ ಅಧಿಕಾರಿಯೊಬ್ಬರು ವಾರದಲ್ಲಿ ಎರಡು ದಿನ ಬಂದು ಹೋಗುತ್ತಾರೆ. ಹಾಗೆಯೇ ಇಲಾಖೆಯಲ್ಲಿ ಎಲ್ಲವೂ ತಾತ್ಕಾಲಿಕವಾಗಿ ಕೆಲಸ ಮಾಡುವವರ ಸಹಾಯದಿಂದ ಕೆಲಸ ಕಾರ್ಯಗಳು ನಡೆಯುತ್ತಿವೆ.

ಇಲಾಖಾ ಮಾಹಿತಿ, ಬೀಜ, ರಸಗೊಬ್ಬರ, ಔಷಧ ಮತ್ತು ಇತರ ಸೌಲಭ್ಯಗಳ ವಿತರಣೆ ಕುರಿತು ನಿಗಾ ಇರಿಸಬೇಕು. ರಸಗೊಬ್ಬರ ಅಂಗಡಿಗಳ ನಿಯಂತ್ರಣ ನೋಡಿಕೊಳ್ಳಬೇಕು. ಪಿಎಂ ಕಿಸಾನ್‌ನಂಥ ಯೋಜನೆಗಳ ನೋಂದಣಿ, ಪರಿಶೀಲನೆ ನಡೆಸಬೇಕು, ಬೆಳೆ ಸಮೀಕ್ಷೆ, ಬೆಳೆ ಹಾನಿ ಸಮೀಕ್ಷೆ, ವಿವಿಧ ಮಾಹಿತಿ ಕಾರ್ಯಕ್ರಮ, ಗ್ರಾಮಸಭೆ, ಅಧಿಕಾರಿಗಳ ಮತ್ತು ಜನಪ್ರತಿನಿಗಳ ಸಭೆ ಹೀಗೆ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ಸಭೆಗಳಿಗೆ ಹೋಗದಿದ್ದರೆ ಎಲ್ಲಿದ್ದಾರೆ ಅಧಿಕಾರಿಗಳು ಎಂಬ ಪ್ರಶ್ನೆಯನ್ನು ಎದುರಿಸಬೇಕು, ಸಾರ್ವಜನಿಕರ ಟೀಕೆ, ಟಿಪ್ಪಣಿಗಳಿಗೆ ಸದಾ ಕಿವಿಯಾಗಬೇಕು. ಅಗತ್ಯಕ್ಕಿಂತ ಕಡಿಮೆ ಸಿಬ್ಬಂದಿ ಇರುವ ಕಾರಣ ರೈತರಿಗೂ ಕಷ್ಟ, ಸಿಬ್ಬಂದಿಗೂ ಸಂಕಷ್ಟ. ಸಹಜವಾಗಿ ಒತ್ತಡ ಹೆಚ್ಚು. ಇದರ ಪರಿಣಾಮ ರೈತರಿಗೂ ಆಗುತ್ತದೆ. ಕ್ಷೇತ್ರಕ್ಕೆ ಬಂದು ಸಲಹೆ ಮಾರ್ಗದರ್ಶನ ಮಾಡಲು ಸಹಾಯಕ ಕೃಷಿ ಅಧಿಕಾರಿಗಳೂ ಇಲ್ಲ, ರೈತ ಸಂಪರ್ಕ ಕೇಂದ್ರಗಳಲ್ಲೂ ಇಂಥದ್ದೇ ಸ್ಥಿತಿ. ವಿವಿಧ ಯೋಜನೆ, ಸಹಾಯಧನ ಪಡೆಯಲು ರೈತನೂ, ಇರುವ ಸಿಬ್ಬಂದಿಯೂ ಪರದಾಟ ನಡೆಸಬೇಕು.

ಹುದ್ದೆಗಳು ಖಾಲಿ ಖಾಲಿ

ಕೃಷಿ ಅಧಿಕಾರಿ 5: ಖಾಲಿ 4 ಕಾರ್ಯನಿರ್ವಹಿಸುತ್ತಿರುವವರು 1

ಸಹಾಯಕ ಕೃಷಿ ಅಧಿಕಾರಿ 12: ಖಾಲಿ 12, ಕಾರ್ಯನಿರ್ವಹಿಸುತ್ತಿರುವವರು 0

ಅಧೀಕ್ಷಕರು 1 : ಖಾಲಿ 1, ಕಾರ್ಯನಿರ್ವಹಿಸುತ್ತಿರುವವರು 0

ಬೆರಳಚ್ಚುಗಾರರು 1: ಖಾಲಿ 1, ಕಾರ್ಯನಿರ್ವಹಿಸುತ್ತಿರುವವರು 0

ಪ್ರಥಮ ದರ್ಜೆ ಸಹಾಯಕರು 1: ಖಾಲಿ 1, ಕಾರ್ಯನಿರ್ವಹಿಸುತ್ತಿರುವವರು 0

ದ್ವಿತೀಯ ದರ್ಜೆ ಸಹಾಯಕರು 2: ಖಾಲಿ 2, ಕಾರ್ಯನಿರ್ವಹಿಸುತ್ತಿರುವವರು 0

ವಾಹನ ಚಾಲಕರು 1: ಖಾಲಿ 1, ಕಾರ್ಯನಿರ್ವಹಿಸುತ್ತಿರುವವರು 0

ಕಚೇರಿ ಸಹಾಯಕರು 3: ಖಾಲಿ 3, ಕಾರ್ಯನಿರ್ವಹಿಸುತ್ತಿರುವವರು 0