ಹಾಸನ: ಇದೆ ಪ್ರಪ್ರಥಮ ಬಾರಿಗೆ ಕರಾವಳಿಯ ಬಹುದೊಡ್ಡ ಕ್ರೀಡೆಯಾಗಿರುವಂತಹ ಕಂಬಳವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನ.25 ರಿಂದ ಎರಡು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಬೆಂಗಳೂರು ಕಂಬಳ ಸಮಿತಿಯ ಉಪಾಧ್ಯಕ್ಷ ಉಪೇಂದ್ರ ಶೆಟ್ಟಿ ತಿಳಿಸಿದರು.
ಕರಾವಳಿಯ ಭಾಗದಲ್ಲಿ ಅತ್ಯಂತ ವಿಶಿಷ್ಟ ಮತ್ತು ಅರ್ಥಪೂರ್ಣವಾಗಿ ನಡೆಸಿಕೊಂಡು ಬರುವಂತಹ ಕಂಬಳವನ್ನು ರಾಜ್ಯಾದ್ಯಂತ ಪಸರಿಸುವ ಮೂಲಕ ಇದೊಂದು ಬಹುದೊಡ್ಡ ಕ್ರೀಡೆಯಾಗಿ ಹೊರಹೊಮ್ಮಲಿ ಎನ್ನುವ ಉದ್ದೇಶದಿಂದ ಮೊದಲ ಬಾರಿಗೆ ಕರಾವಳಿ ಬಿಟ್ಟು ಹೊರಭಾಗದಲ್ಲಿ ಕಂಬಳ ಆಯೋಜನೆ ಮಾಡಲು ನಿರ್ಧರಿಸಿದ್ದೇವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನ.25ರಂದು ಬೆಂಗಳೂರು ಕಂಬಳ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಎಚ್.ಡಿ .ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಹಾಗೂ ಚಲನಚಿತ್ರ ನಟರು ರಾಜಕೀಯ ಪಕ್ಷದ ಮುಖಂಡರು ಆಗಮಿಸಲಿದ್ದಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಸುಮಾರು 175 ಜೋಡಿ ಕೋಣಗಳು ಕರಾವಳಿಯಿಂದ ತೆರಳಲ್ಲಿದ್ದು ನ.23ರಂದು ಹಾಸನ ನಗರಕ್ಕೆ 4.30ಕ್ಕೆ ಆಗಮಿಸಲಿವೆ. ಕಂಬಳ ಕೋಣಗಳಿಗೆ ಭವ್ಯ ಸ್ವಾಗತ ನೀಡುವ ಮೂಲಕ ಬರಮಾಡಿಕೊಳ್ಳಲಾಗುವುದು. ನಗರದ ಹೊರವಲಯದ ದೇವರಾಯಪಟ್ಟಣದಿಂದ ನಗರದ ಇಂಜಿನಿಯರಿಂಗ್ ಕಾಲೇಜು ಆವರಣದವರೆಗೆ ಮೆರವಣಿಗೆ ಮೂಲಕ ಆಗಮಿಸಿ, ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಬೆಂಗಳೂರಿಗೆ ತೆರಳಲಾಗುವುದು ಎಂದು ಮಾಹಿತಿ ನೀಡಿದರು.
ಈ ಸ್ವಾಗತ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಹಾಗೂ ಮಾಜಿ ಶಾಸಕರು, ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸುಮಾರು 6.50 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ ಕಂಬಳ ನಡೆಸಲಾಗುತ್ತಿದ್ದು ಗೆದ್ದಂತಹವರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುವುದು. ಸರ್ಕಾರ ಒಂದು ಕೋಟಿ ರೂ. ಸಹಾಯಧನ ನೀಡಿದ್ದು ಉಳಿದ ಹಣವನ್ನು ಸಮಿತಿ ವತಿಯಿಂದ ಸಂಗ್ರಹಿಸಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಕಂಬಳ ಸಮಿತಿಯ ಪದಾಧಿಕಾರಿಗಳಾದ ಸುರೇಶ್, ಶ್ರೀನಿವಾಸ್ ಶಾಸ್ತ್ರಿ, ರಾಜೇಶ್ ಶೆಟ್ಟಿ, ಗಿರಿ ಶೆಟ್ಟಿ, ಪ್ರವೀಣ್ ಹಾಜರಿದ್ದರು.