ಜಿಲ್ಲೆ

25ಕ್ಕೆತಾಲೂಕು ಮಟ್ಟದ ಜಾನಪದ ಸಮ್ಮೇಳನ

ಜಿ.ಹೆಚ್. ಧನ್ಯಕುಮಾರ್

ಕಡೂರು: ಚಿಕ್ಕನಲ್ಲೂರು ಗ್ರಾಮದಲ್ಲಿ 25ರಂದು ತಾಲೂಕು ಮಟ್ಟದ ಜಾನಪದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಹೇಳಿದರು.

ಚಿಕ್ಕನಲ್ಲೂರು ಗ್ರಾಮದಲ್ಲಿ ತಾಲೂಕು ಸಮ್ಮೇಳನದ ಆಯೋಜನೆ ಅಂಗವಾಗಿ ಶನಿವಾರ ಗ್ರಾಮಸ್ಥರು ಹಾಗೂ ಗ್ರಾಮದ ಹಿರಿಯ ಕಲಾವಿದರ ಜತೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಾನಪದ ಪರಿಷತ್‌ನಿಂದ ಅಚ್ಚುಕಟ್ಟಾಗಿ ತಾಲೂಕು ಸಮ್ಮೇಳನ ಆಯೋಜನೆಗೊಳಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವುದು ಪರಿಷತ್ತಿನ ಮುಖ್ಯ ಉದ್ದೇಶವಾಗಿದೆ. ಸಮ್ಮೇಳನದಲ್ಲಿ ಜಾನಪದ ವಿಚಾರ ಗೋಷ್ಠಿಗಳು ಮತ್ತು ಹಿರಿಯ ಕಲಾವಿದರನ್ನು ಗೌರವಿಸಲಾಗುವುದು ಎಂದರು.

ತಾಲೂಕಿನಲ್ಲಿ ವೀರಗಾಸೆ, ಡೊಳ್ಳು ಕುಣಿತ, ಕೀಲು ಕುದುರೆ, ಗಾರುಡಿ ಗೊಂಬೆ, ತೊಗಲು ಬೊಂಬೆ, ಜಾನಪದ ಗಾಯನ ಮತ್ತು ನೃತ್ಯ ಹಾಗೂ ಅಸಾದಿ ,ಗೀಗಿ ಪದ, ಭಜನೆ, ಮುಂತಾದ ಕಲಾವಿದರಿದ್ದು, ಅವರೆಲ್ಲರಿಗೂ ಸೂಕ್ತ ವೇದಿಕೆ ದೊರಕಿಸಿಕೊಡಲು ತಾಲೂಕು ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ. ತಾಲೂಕಿನ ಎಲ್ಲ ಕಲಾವಿದರು ಕಲಾ, ಪೋಷಕರು ಸಮ್ಮೇಳನದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ತಾಲೂಕು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಜಗದೀಶ್ ಆಚಾರ್ ಮಾತನಾಡಿ, ಕಡೂರಿನ ಹಿರಿಯ ಜಾನಪದ ಕಲಾವಿದ ನಾಗರಾಜ್ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಮ್ಮೇಳನದ ಅಧ್ಯಕ್ಷರನ್ನು ಪ್ರಮುಖ ಜಾನಪದ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಗುವುದು ಎಂದರು.

ಶಿಕ್ಷಕ ಸ್ವಾಮಿ, ಹಿರೇನಲೂರು ಹೋಬಳಿ ಅಧ್ಯಕ್ಷ ಚಿಕ್ಕನಲ್ಲೂರು ಜಯಣ್ಣ, ಡಾ.ಮಾಳೇನಳ್ಳಿ ಬಸಪ್ಪ, ಗ್ರಾಪಂ ಸದಸ್ಯ ಲೋಕನಾಥ,ರಾಜಣ್ಣ, ಕಲಾವಿದ ಶಂಕರಪ್ಪ, ರೇವಣ್ಣ, ತಿಪ್ಪೇಶ, ಶಿವಕುಮಾರ ಶ್ರೀನಿವಾಸ್, ಜಯಣ್ಣ ಹಾಗೂ ಸೋಮಶೇಖರ್ ಪರಮೇಶಣ್ಣ, ಶ್ರೀನಿವಾಸ್ ಮಲ್ಲಿಕಾರ್ಜುನ ಮಹಿಳಾ ಸಂಘದ ಪದಾಧಿಕಾರಿಗಳು ಇದ್ದರು.