ಜಿಲ್ಲೆ

ರಾಜ್ಯದಲ್ಲಿ ಹೊಸದಾಗಿ 254 ‘ನಮ್ಮ ಕ್ಲಿನಿಕ್’ಆರೋಗ್ಯ ಇಲಾಖೆ ಸಿದ್ಧತೆ

ಪಂಕಜ ಕೆ.ಎಂ.

ಬೆಂಗಳೂರು: ಬಸ್‌ನಿಲ್ದಾಣ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಹೊಸದಾಗಿ 254 ‘ನಮ್ಮ ಕ್ಲಿನಿಕ್’ಗಳನ್ನು ಆರಂಭಿಸಲು

ಆರೋಗ್ಯ ಇಲಾಖೆ ಮುಂದಾಗಿದ್ದು, ಈ ಸಂಬಂಧ ಸೂಕ್ತ ಸ್ಥಳ ಗುರುತಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆರೋಗ್ಯ ಸೌಧದಲ್ಲಿ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ನೂತನ ಕ್ಲಿನಿಕ್‌ಗಳನ್ನು ಆರಂಭಿಸುವ ನಿಟ್ಟಿನಲ್ಲಿ ಸ್ಥಳ ಗುರುತಿಸಿ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ತಿಳಿಸಿದರು.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 503 ‘ನಮ್ಮ ಕ್ಲಿನಿಕ್’ ಗಳನ್ನ ಸದೃಢಗೊಳಿಸಲು ಕ್ರಮ ವಹಿಸಬೇಕು. ಅದರ ಜೊತೆ ಜೊತೆಗೆ ಪ್ರಸಕ್ತ ಸಾಲಿನಲ್ಲಿ ಹೊಸದಾಗಿ 254 ‘ನಮ್ಮ ಕ್ಲಿನಿಕ್’ಗಳನ್ನ ಪ್ರಾರಂಭಿಸಬೇಕು ಎಂದರು.

ಈ ಕುರಿತು ಸಂಪುಟದ ಒಪ್ಪಿಗೆ ಪಡೆಯಲು ಶೀಘ್ರವೇ ಕ್ರಮವಹಿಸಬೇಕು ಎಂದ ಅವರು, ಇದೇ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ದುರಸ್ಥಿ ಕಾರ್ಯಗಳು, ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 15 ನೇ ಹಣಕಾಸಿನಲ್ಲಿ ಸಿಗುವ ಅನುದಾನವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಇಲಾಖೆ ಪ್ರಧಾನ ಕಾರ್ಯದರ್ಶಿಅನೀಲ್ ಕುಮಾರ್, ಆಯುಕ್ತ ಡಿ. ರಂದೀಪ್, ಎನ್‌ಎಚ್‌ಎಂ ವ್ಯವಸ್ಥಾಪಕ ನಿರ್ದೇಶಕ ನವೀನ್ ಭಟ್ ಇತರರು ಇದ್ದರು.