ಹಾಸನ: ದೇಶದ 78ನೇ ಸ್ವಾತಂತ್ರೊೃೀತ್ಸವದ ಅಂಗವಾಗಿ ಆ.15ರಂದು ‘ನಮ್ಮ ನಡೆ ಶಾಂತಿ- ಸೌಹಾರ್ದದ ಕಡೆ’ ಎಂಬ ಧ್ಯೇಯದೊಂದಿಗೆ 2500 ಅಡಿ ಉದ್ದದ ರಾಷ್ಟ್ರಧ್ವಜ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯೂಥ್ ಹ್ಯಾಂಡ್ಸ್ ಫೌಂಡೇಷನ್ ಅಧ್ಯಕ್ಷ ಎಚ್.ಜೆ. ಬಾಲಾಜಿ ತಿಳಿಸಿದರು.
ಜಿಲ್ಲಾಡಳಿತದ ಸಹಕಾರದೊಂದಿಗೆ ನಮ್ಮ ಹಾಸನ ಟಿವಿ, ಹಾಗೂ ಯೂಥ್ ಹ್ಯಾಂಡ್ಸ್ ಫೌಂಡೇಷನ್ ಸಹಯೋಗದಲ್ಲಿ ಆಗಸ್ಟ್ 15 ರಂದು ಬೆಳಿಗ್ಗೆ 8 ಗಂಟೆಗೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸಮಾಜ ಸೇವಕ ಡಿ.ಸಿ. ಲಕ್ಷ್ಮೀನಾರಾಯಣ ಗುಪ್ತಾ ಮತ್ತು ತಂಡದಿಂದ ತಯಾರಿಸಲ್ಪಟ್ಟ 2500 ಅಡಿ ಉದ್ದದ ರಾಷಟ್ರೆಧ್ವಜ ಮೆರವಣಿಗೆ ಕಾರ್ಯಕ್ರಮ ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭವಾಗಿ ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೃಹತ್ ಧ್ವಜ ಮೆರವಣಿಗೆ ದೇಶದ ಅನೇಕ ಭಾಗದಲ್ಲಿ ಈಗಾಗಲೇ ನಡೆದಿದೆ. ಇಂತಹ ಒಂದು ಅದ್ಭುತವಾದ ಕಾರ್ಯಕ್ರಮವನ್ನು ಹಾಸನದಲ್ಲಿ ನಡೆಸಬೇಕು ಎಂಬ ಉದ್ದೇಶದಿಂದ ನಡೆಸಲಾಗುತ್ತಿದೆ. ಈ ಮೆರವಣಿಗೆಗೆ ‘ನಮ್ಮ ನಡೆ, ಶಾಂತಿ- ಸೌಹಾರ್ದದ ಕಡೆ’ ಎಂದು ಹೆಸರಿಸಲಾಗಿದೆ. ತಿರಂಗ ಮಾರ್ಚ್ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಜಿಪಂ ಸಿಇಒ ಡಾ.ಬಿ.ಆರ್. ಪೂರ್ಣಿಮಾ ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಯ ಸಿಬ್ಬಂದಿ, ಜನಪ್ರತಿನಿದಿಗಳು, ಹಿರಿಯ ಪತ್ರಕರ್ತರು, ಸಾಹಿತಿಗಳು, ಬರಹಗಾರರು, ವಿವಿಧ ಸಂಘಟನೆಗಳ ಪ್ರಮುಖರು, ಕಲಾವಿದರು, ಗಣ್ಯರು ಸೇರಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಾರ್ಮಿಕರು, ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಪಾದಕ ತೋಫಿಕ್ ಅಹಮದ್, ಯೂಥ್ ಹ್ಯಾಂಡ್ಸ್ ಫೌಂಡೇಷನ್ ಕಾರ್ಯಕರ್ತ ಶಬರೀಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಎಂಸಿಇ ಕಾಲೇಜು ನಿವೃತ್ತ ಪ್ರಾಧ್ಯಾಪಕ ಯೋಗೇಂದ್ರ ಇತರರು ಉಪಸ್ಥಿತರಿದ್ದರು.