ನಾಗಮಂಗಲ: ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳಾಗಿರುವುದನ್ನು ಹೊರತುಪಡಿಸಿದರೆ ನನ್ನ ನಂತರದಲ್ಲಿ ಅಧಿಕಾರಕ್ಕೆ ಬಂದವರು ಸ್ವಯಂ ಅಭಿವೃದ್ಧಿ ಹೊಂದುವ ಮೂಲಕ ತಾಲೂಕನ್ನು ಬರಡಾಗಿಸಿ ಅಭಿವೃದ್ದಿಯನ್ನೇ ಶೂನ್ಯವಾಗಿಸಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ದೇವಲಾಪುರ ಹೋಬಳಿಯ ಭೀಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಂಡೇನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ಕುಡಿಯುವ ನೀರು, ಜಮೀನು ಮಂಜೂರು, ಪಶು ಆಸ್ಪತ್ರೆಗಳನ್ನು ನನ್ನ ಆಡಳಿತ ಅವಧಿಯಲ್ಲಿ ನಿರ್ಮಾಣ ಮಾಡಿದ್ದೇನೆ. ಆದರೆ ನಂತರ ಬಂದ ಶಾಸಕರು ಅಭಿವೃದ್ಧಿ ಕೆಲಸ ಮಾಡದೆ ಸ್ವಯಂ ಅಭಿವೃದ್ಧಿಯಾಗುವುದರಲ್ಲಿ ಮಗ್ನರಾಗಿದ್ದಾರೆ ಎಂದರು.
ತಾಲೂಕಿನಲ್ಲಿ ಜನಪರವಾದ ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿವೆ. ತಾಲೂಕಿನ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಜನರು ನಲುಗಿಹೋಗಿದ್ದಾರೆ. ಇಷ್ಟಾದರೂ ಜನ ಪ್ರತಿನಿಧಿಗಳು ಏನು ಆಗಿಲ್ಲದಂತೆ ಮೌನವಾಗಿದ್ದಾರೆ. ಶಾಲೆಗಳಲ್ಲಿ ಶಿಕ್ಷಕರಿಲ್ಲದೆ ಎರಡು ಮೂರು ಶಾಲೆಗೆ ಒಬ್ಬ ಶಿಕ್ಷಕರನ್ನು ನಿಯೋಜಿಸಿದರೆ ಮಕ್ಕಳ ವಿದ್ಯಾಭ್ಯಾಸದ ಗತಿ ಏನಾಗಬೇಕು. ಇದರ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಕೇಳಿದರೆ ನಾವೇನು ಮಾಡುವುದು ಇರುವ ಶಿಕ್ಷಕರನ್ನು ಬಳಸಿಕೊಂಡು ಮಕ್ಕಳಿಗೆ ಶಿಕ್ಷಣ ನೀಡುತಿದ್ದೇವೆ ಎನ್ನುತ್ತಾರೆ.
ಅಲ್ಲದೆ ತಾಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಅಪಾಯದ ಅಂಚಿನಲ್ಲಿವೆ. ಈ ರೀತಿಯ ಸಣ್ಣ ಕೆಲಸಗಳನ್ನು ಮಾಡದಿದ್ದವರನ್ನು ಜನರು ಈ ಬಾರಿ ತಿರಸ್ಕರಿಸಬೇಕಿದೆ. ತಾಲೂಕಿನ 571 ಹಳ್ಳಿಗಳಿದ್ದು, 98 ಗ್ರಾಮಗಳಿಗೆ ಮಾತ್ರ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಅದರಲ್ಲಿಯೂ ಸಹ 75 ಘಟಕಗಳು ಕೆಟ್ಟು ಸ್ಥಗಿತವಾಗಿ ವರ್ಷ ಕಳೆದರೂ ರಿಪೇರಿಯಾಗಿಲ್ಲ. ತಾಲೂಕಿನಲ್ಲಿ ಸರಿಯಾಗಿ ವೃದ್ಧಾಪ್ಯ ವೇತನ, ಮಾಸಾಶನಗಳು ಮಂಜೂರಾಗುತ್ತಿಲ್ಲ. ಶಾಸಕರು ಜನರನ್ನು ಕರೆದು ಭೂಮಿಯನ್ನು ಮಂಜೂರು ಮಾಡಿಸಿಕೊಡುತ್ತೇನೆ ಎಂದು ಇಲ್ಲಸಲ್ಲದ ಭರವಸೆ ನೀಡುತ್ತ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗಾಳಿಸುದ್ದಿಗೆ ಕಿವಿಗೊಡಬೇಡಿ: ಈ ಬಾರಿಯ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಚಿತವಾಗಿದ್ದು, ವಿರೋಧಿಗಳು ಹರಡುವ ಗಾಳಿ ಮಾತಿಗೆ ಯಾರೂ ಕಿವಿಗೊಡುವುದು ಬೇಡ. ನಾನು ಪಕ್ಷೇತರ ಅಭ್ಯರ್ಥಿಯಾಗಿಯೇ ಸ್ಪರ್ಧಿಸುತ್ತೇನೆ. ಬೇರೆ ಪಕ್ಷದವರಿಗೆ ನನ್ನ ಸಾಮರ್ಥ್ಯದ ಬಗ್ಗೆ ತಿಳಿದಿದ್ದು ಆಹ್ವಾನ ಮಾಡುತ್ತಿದ್ದಾರೆ. ಆದರೆ ನಾನು ಯಾವ ಪಕ್ಷಕ್ಕೂ ಸೇರ್ಪಡೆಯಾಗದೆ ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು.
ಅದ್ದೂರಿಯಾಗಿ ಸ್ವಾಗತಿಸಿದ ಗ್ರಾಮಸ್ಥರು: ಸಭೆಗೂ ಮುನ್ನ ಗ್ರಾಮದ ಕೇಂದ್ರ ಭಾಗದಲ್ಲಿ ಶಿವರಾಮೇಗೌಡರ ಅಭಿಮಾನಿಗಳು ಪಟಾಕಿ ಸಿಡಿಸಿ ಜೆಸಿಬಿ ಯಂತ್ರಗಳ ಮೂಲಕ ಪುಷ್ಪಾರ್ಚನೆ ಮಾಡಿ ಬೃಹತ್ ಸೇಬಿನ ಹಾರವನ್ನು ಹಾಕಿ ಸ್ವಾಗತಿಸಿದರು. ಮುಖಂಡರಾದ ಎಲ್.ಎಸ್.ಚೇತನ್‌ಗೌಡ, ರಮೇಶ್, ಲಕ್ಷ್ಮಣ, ತಾ.ಪಂ. ಮಾಜಿ ಸದಸ್ಯ ಹೇಮರಾಜ್, ಬಿಂಡೇನಹಳ್ಳಿ ಕೃಷ್ಣೇಗೌಡ, ದೇವರಾಜು, ರಾಮೇಗೌಡ, ಭೀಮನಹಳ್ಳಿ ಮರಿಸ್ವಾಮಿ, ಚನ್ನಪ್ಪ, ಮಂಜೇಗೌಡ, ಸೋಮ ಸೇರಿದಂತೆ ಇತರರಿದ್ದರು.