ಕಲಬುರಗಿ: ಕರ್ನಾಟಕದಲ್ಲಿ ಕಾಂಗ್ರೆಸ್ ಆರಂಭಿಸಿರುವ ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಈವರೆಗೆ 25 ಲಕ್ಷ ಹೊಸಬರು ಕಾಂಗ್ರೆಸ್ ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಕುಸನೂರ ರಸ್ತೆಯಲ್ಲಿರುವ ಜೈ ಭವಾನಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಜೇವರ್ಗಿ, ಅಫಜಲಪುರ, ಸೇಡಂ, ಕಲಬುರಗಿ ಗ್ರಾಮೀಣ, ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಸದಸ್ಯತ್ವ ಅಭಿಯಾನ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿ, ಮಾ.31ರವರೆಗೆ ಈ ಅಭಿಯಾನ ನಡೆಯಲಿದೆ. ಚುನಾವಣಾ ಆಯೋಗದ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ಪ್ರಾವಿಷನ್ ಸದಸ್ಯತ್ವ ಪಡೆದಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ ಎಂದರು.
ದೇಶದಲ್ಲಿ ಮೊದಲ ಬಾರಿ ಕಾಂಗ್ರೆಸ್ ಪಕ್ಷ ಡಿಜಿಟಲ್ ಸದಸ್ಯತ್ವ ಅಭಿಯಾನ ಆರಂಭಿಸಿದೆ. ಪ್ರಕ್ರಿಯೆ ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ನೋಂದಣಿದಾರರನ್ನು ನೇಮಕ ಮಾಡಿ, ಮತದಾರರ ಗುರುತಿನ ಚೀಟಿ, ದೂರವಾಣಿ ಸಂಖ್ಯೆ ಇತ್ಯಾದಿ ವಿವರ ಪಡೆದು 5 ರೂ. ಶುಲ್ಕ ಪಡೆದುಕೊಂಡು ಸದಸ್ಯತ್ವ ನೀಡಲಾಗುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ಪಿಆರ್ ಒಗಳು ಜಿಲ್ಲೆಯ ಕ್ಷೇತ್ರವಾರು ಆಗಿರುವ ಸದಸ್ಯತ್ವ ಪ್ರಗತಿ ಪರಿಶೀಲಿಸಿದರು. ಕೆಲವೊಂದು ಸಲಹೆ ನೀಡಿದರು. ಮಾಸಾಂತ್ಯದವರೆಗೂ ಗುರಿ ತಲುಪಲು ತಿಳಿಸಿದರು.