ಬೀದರ್: ರಾಷ್ಟ್ರೀಯ ಜಾಗರಣ ಸಮಿತಿಯ ರಾಷ್ಟ್ರೀಯ ಸಂಚಾಲಕರೂ ಆದ ಖ್ಯಾತ ಚಿಂತಕ ಪುಷ್ಪೇಂದ್ರ ಕುಲಶ್ರೇಷ್ಠ ಅವರು ಡಿ. 25 ರಂದು ಬೀದರ್‍ಗೆ ಬರಲಿದ್ದಾರೆ ಎಂದು ಭಾರತೀಯ ಸಂಸ್ಕøತಿ ಜನಜಾಗೃತಿ ಕಾರ್ಯಕ್ರಮದ ಪ್ರಚಾರ ಸಮಿತಿಯ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಹೇಳಿದರು.
ನಗರದ ಗುಂಪಾ ರಸ್ತೆಯಲ್ಲಿ ಇರುವ ಕರ್ನಾಟಕ ಫಾರ್ಮಸಿ ಕಾಲೇಜ್ ಆವರಣದಲ್ಲಿ ಅಂದು ಸಂಜೆ 4.30ಕ್ಕೆ ರಾಷ್ಟ್ರೀಯ ಜಾಗರಣ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿರುವ ಭಾರತೀಯ ಸಂಸ್ಕøತಿ ಬೃಹತ್ ಜನಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿದ್ಧಾರೂಢ ಮಠದ ಡಾ. ಶಿವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಜಿಲ್ಲೆಯ ಮಠಾಧೀಶರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಯಶಸ್ವಿಗೆ ಈಗಾಗಲೇ ಭರದ ಸಿದ್ಧತೆಗಳು ನಡೆದಿವೆ. ಸ್ವಾಗತ, ಪ್ರಚಾರ, ವೇದಿಕೆ, ಶಿಸ್ತು, ರಕ್ಷಣೆ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲೆಯ ಎಂಟೂ ತಾಲ್ಲೂಕುಗಳಲ್ಲಿ ಪ್ರತ್ಯೇಕ ಸಮಿತಿಗಳನ್ನು ಸಹ ರಚಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ಗಣ್ಯರು, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಆಸನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇರಲಿದೆ. ಬಿ.ವಿ.ಭೂಮರಡ್ಡಿ ಕಾಲೇಜು ಆವರಣದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಎಂಟೂ ತಾಲ್ಲೂಕುಗಳು ಸೇರಿದಂತೆ ಸುಮಾರು 15 ಸಾವಿರ ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಪುಷ್ಪೇಂದ್ರ ಕುಲಶ್ರೇಷ್ಠ ಅವರು ಶ್ರೇಷ್ಠ ವಿದ್ವಾಂಸ ಹಾಗೂ ಪ್ರಖರ ವಾಗ್ಮಿ ಆಗಿದ್ದಾರೆ. ದೇಶದ ಬಹು ಚರ್ಚಿತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ದೇಶದಾದ್ಯಂತ ಭಾರತೀಯ ಸಂಸ್ಕøತಿ ಕುರಿತು ಜನಜಾಗೃತಿ ಮೂಡಿಸುತ್ತಿದ್ದಾರೆ. ಹೀಗಾಗಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಮಿತಿ ರಚಿಸಿ, ಭಾರತೀಯ ಸಂಸ್ಕøತಿ ಕುರಿತು ಜನಜಾಗೃತಿ ಮೂಡಿಸಲಾಗುವುದು ಎಂದು ರಾಷ್ಟ್ರೀಯ ಜಾಗರಣ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಶಂಕರರಾವ್ ಪಾಟೀಲ ತಿಳಿಸಿದರು.
ಕಾರ್ಯಕ್ರಮದ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀಕಾಂತ ಮೋದಿ, ಬಸವರಾಜ ಸ್ವಾಮಿ, ಬೀದರ್ ನಗರ ಸಂಯೋಜಕ ಸೋಮಶೇಖರ ಪಾಟೀಲ ಗಾದಗಿ ಹಾಗೂ ಸಹ ಸಂಯೋಜಕ ರಾಜಕುಮಾರ ಬಿಜ್ಜಾ ಸುದ್ದಿಗೋಷ್ಠಿಯಲ್ಲಿ ಇದ್ದರು.