4ನೇ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಬಾಲಕನ ತಂದೆಗೆ 25 ಸಾವಿರ ರೂ. ದಂಡ ವಿಧಿಸಿದೆ.  
ಜಿಲ್ಲೆ

ಬೈಕ್ ಚಲಾಯಿಸಿದ ಅಪ್ರಾಪ್ತ, ತಂದೆಗೆ 25 ಸಾವಿರ ರೂ. ದಂಡ

ಶಿವಮೊಗ್ಗ: ನಗರದಲ್ಲಿ ಅಪ್ರಾಪ್ತನಿಗೆ ಬೈಕ್ ಚಲಾಯಿಸಲು ಅವಕಾಶ ನೀಡಿದ್ದಕ್ಕೆ 4ನೇ ಜಿಲ್ಲಾ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಬಾಲಕನ ತಂದೆಗೆ 25 ಸಾವಿರ ರೂ. ದಂಡ ವಿಧಿಸಿದೆ.

ನಗರದ ಕ್ಲಾರ್ಕ್‌ಪೇಟೆಯ ಓಂ ಪ್ರಕಾಶ್ ಎಂಬುವರು ದಂಡ ಕಟ್ಟಿದವರು. ಆ.12ರಂದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಪಶ್ಚಿಮ ಠಾಣೆ ಪಿಎಸ್‌ಐ ತಿರುಮಲೇಶ್ ಅವರು ವಾಹನಗಳ ತಪಾಸಣೆ ವೇಳೆ ಅಪ್ರಾಪ್ತ ಬೈಕ್ ಚಲಾಯಿಸುತ್ತಿದ್ದ. ತಡೆದು ಪರಿಶೀಲಿಸಿದಾಗ ಚಾಲನಾ ಪರವಾನಗಿ ಇಲ್ಲದೇ ಬೈಕ್ ಓಡಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ.
ಅಪ್ರಾಪ್ತನಿಗೆ ಬೈಕ್ ಓಡಿಸಲು ಅವಕಾಶ ನೀಡಿದ ಆತನ ತಂದೆ, ಬೈಕ್‌ನ ಮಾಲೀಕ ಓಂ ಪ್ರಕಾಶ್ ವಿರುದ್ಧ ಪಶ್ಚಿಮ ಸಂಚಾರ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಷಣ ಪಟ್ಟಿ ಸಲ್ಲಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಬೈಕ್ ಮಾಲೀಕ ಓಂ ಪ್ರಕಾಶ್ ಅವರಿಗೆ ದಂಡ ವಿಧಿಸಿದ್ದಾರೆ.