ಹುಣಸೂರು ತಾಲೂಕಿನ ಕಡೇಮನುಗನಹಳ್ಳಿಯಲ್ಲೇ ಅಸ್ವಸ್ಥಗೊಂಡವರಿಗೆ ತುರ್ತು ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡ. 
ಜಿಲ್ಲೆ

ಕಲುಷಿತ ನೀರು ಸೇವಿಸಿ 25 ಜನ ಅಸ್ವಸ್ಥ

ನಾಗೇಶ ಎಸ್

ಹನಗೋಡು: ಹನಗೋಡು ಹೋಬಳಿಯ ಕಡೇಮನುಗನಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿ ಭೇದಿ ಕಾಣಿಸಿಕೊಂಡ ಪರಿಣಾಮ ಅಸ್ವಸ್ಥಗೊಂಡು 25ಕ್ಕೂ ಹೆಚ್ಚು ಮಂದಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಕಳೆದ ಮೂರ‌್ನಾಲ್ಕು ದಿನಗಳ ಹಿಂದೆ ಕಡೇಮನುಗನಹಳ್ಳಿ ಗ್ರಾಪಂ ವತಿಯಿಂದ ಮನೆಗಳಿಗೆ ಪೂರೈಸುವ ನೀರಿನೊಂದಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ವೇಳೆ ಪೈಪ್ ಒಡೆದು ಕಲುಷಿತ ನೀರು ಸೇರಿಕೊಂಡು, ಆ ನೀರನ್ನೇ ಗ್ರಾಮಸ್ಥರು ಅಡುಗೆಗೆ ಬಳಸಿದ್ದರಿಂದ ಹಾಗೂ ಕುಡಿಯಲು ಉಪಯೋಗಿಸಿದ ಪರಿಣಾಮ ಗ್ರಾಮದ ಅನೇಕ ಮಂದಿ ಅಸ್ವಸ್ಥಗೊಂಡಿದ್ದಾರೆ.

ಮೊದಲ ದಿನವೇ 50ಕ್ಕೂ ಹೆಚ್ಚು ಮಂದಿಗೆ ಭೇದಿ ಕಾಣಿಸಿಕೊಂಡು ಹುಣಸೂರು, ಮೈಸೂರು, ಪಿರಿಯಾಪಟ್ಟಣ ಹಾಗೂ ಹನಗೋಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ತೀವ್ರ ನಿತ್ರಾಣಗೊಂಡಿದ್ದ ಇಬ್ಬರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹನಗೋಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಭಾರತಿ, ಅಮಾಸೇಗೌಡ, ಶಿವಣ್ಣ, ಆನಂದ, ವಿನು, ಸಪ್ರೀತ್, ಬಲರಾಮ, ಶೀಲಾ, ಶಿವಣ್ಣ, ಶಿವು, ಪಾರ್ವತಮ್ಮ, ಪ್ರಶಾಂತ್, ಭವ್ಯಾ, ವಸಂತಾ, ಪ್ರಭಾವತಿ, ಶಾರದಮ್ಮ, ಕೃಷ್ಣೇಗೌಡ, ಪುಷ್ಪಲತಾ, ಮಂಗಳಮ್ಮ, ಪದ್ಮಮ್ಮ, ರಾಜೇಗೌಡ, ನವೀನ, ಕುಮಾರ್, ಶರತ್, ಪ್ರೀತಮ್, ಶಶಿಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರಿಗೆ ಗ್ರಾಮದಲ್ಲೇ ವೈದ್ಯರ ತಂಡ ಚಿಕಿತ್ಸೆ ನೀಡಿ ನಿಗಾ ಇರಿಸಿದೆ.
ಕೆಲವರು ಮನೆಗೆ ತೆರಳಿದ್ದಾರೆ. ಈ ಪೈಕಿ ಶಿವಣ್ಣ, ಭಾರತಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹನಗೋಡು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಜೋಗೇಂದ್ರನಾಥ್ ಮಾಹಿತಿ ನೀಡಿದ್ದಾರೆ.

ಹುಣಸೂರು ಆಸ್ಪತ್ರೆಯಲ್ಲಿ ವಸಂತಾ, ಶೀಲಾ, ಜಯಮ್ಮ, ಪಿರಿಯಾಪಟ್ಟಣ ಆಸ್ಪತ್ರೆಯಲ್ಲಿ ನೀರು ಗಂಟಿ ಉಮೇಶ್ ಚಿಕಿತ್ಸೆ ಪಡೆದರೆ, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸುಮಾ, ಪ್ರಭಾವತಿ ದಾಖಲಾಗಿದ್ದಾರೆ. ಘಟನೆಯಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಗ್ರಾಮದಲ್ಲಿ ದೊಡ್ಡಹೆಜ್ಜೂರು, ನೇರಳಕುಪ್ಪೆ ಆಸ್ಪತ್ರೆ ವೈದ್ಯರಾದ ಡಾ.ಸುಧಾಕರ್, ಡಾ.ಸುನಂದಾ, ಡಾ.ಹರ್ಷ, ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರು ಸೇರಿದಂತೆ ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದು ಚಿಕಿತ್ಸೆ ನೀಡುತ್ತಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾರೂ ಆತಂಕ ಪಡುವಂತಿಲ್ಲ ಎಂದು ಟಿಎಚ್‌ಒ ಡಾ.ಕೀರ್ತಿಕುಮಾರ್ ತಿಳಿಸಿದ್ದಾರೆ.\

ಪೈಪ್ ಒಡೆದಿರುವ ಸ್ಥಳವನ್ನು ಪತ್ತೆ ಹಚ್ಚಿ ಸರಿಪಡಿಸಲಾಗಿದ್ದು, ಟ್ಯಾಂಕನ್ನು ಸ್ವಚ್ಛಗೊಳಿಸಲಾಗಿದೆ. ಮೂರು ದಿನಗಳ ತನಕ ಉಪಯೋಗಿಸಲು ಸಾಧ್ಯವಾಗದ ಕಾರಣ ಗ್ರಾಮಕ್ಕೆ ಟ್ಯಾಂಕರ್ ಮೂಲಕವೇ ನೀರು ಪೂರೈಸಲಾಗುತ್ತಿದೆ. ಅಲ್ಲದೆ ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಾಪಂ ಇಒ ಶಿವಕುಮಾರ್ ತಿಳಿಸಿದರು. ಪಿಡಿಒ ಷಡಕ್ಷರಿ ಸ್ಥಳದಲ್ಲೇ ಇದ್ದಾರೆ.