ಜಿಲ್ಲೆ

ಮಕ್ಕಳಲ್ಲಿ ಕಂಡು ಬರುತ್ತಿರುವ ಡೆಂಘೆ ಪ್ರಕರಣ; ಮುನ್ನೆಚ್ಚರಿಕಾ ಕ್ರಮಕ್ಕೆ ಶಿಕ್ಷಣ ಇಲಾಖೆ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ ದೃಢಪಟ್ಟಿರುವ ಡೆಂಘೆ ಪ್ರಕರಣಗಳ ಪೈಕಿ ಶೇ.25ರಷ್ಟು 6 ರಿಂದ 16 ವರ್ಷದೊಳಗಿನ ಮಕ್ಕಳಲ್ಲೇ ಕಂಡುಬಂದಿದೆ. ಹಾಗಾಗಿ ವಿದ್ಯಾರ್ಥಿಗಳು, ಬೋಧಕರ ಹಾಗೂ ಬೋಧಕೇತರ ವರ್ಗ 10 ಸ್ವಯಂ ರಕ್ಷಣಾ ವಿಧಾನಗಳು ಅನುಸರಿಸುವುದು ಸೇರಿದಂತೆ ಶಾಲೆಗಳ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಡೆಂಘೆ ನಿಯಂತ್ರಣಕ್ಕೆ ಮತ್ತಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಆರೋಗ್ಯ ಇಲಾಖೆ ನಿರ್ದೇಶನದ ಹಿನ್ನೆಲೆಯಲ್ಲಿ ಈ ಸಂಬಂಧ ವಿವರವಾದ ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖಾ ಆಯುಕ್ತರು, ಜುಲೈ ಮಾಸಾಂತ್ಯದವರೆಗೆ ರಾಜ್ಯದಲ್ಲಿ ವರದಿಯಾಗಿರುವ 17 ಸಾವಿರಕ್ಕು ಹೆಚ್ಚು ಡೆಂಘೆ ಪ್ರಕರಣಗಳಲ್ಲಿ ಶೇ.25ರಷ್ಟು 6ರಿಂದ 16 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬಂದಿವೆ. ಹಾಗಾಗಿ ಮಕ್ಕಳನ್ನು ಡೆಂಘೆ ಹರಡುವ ಈಡಿಸ್ ಸೊಳ್ಳೆಯ ಕಡಿತದಿಂದ ರಕ್ಷಿಸಲು 10 ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಬೇಕು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರೆ ಸಿಬ್ಬಂದಿ ಕೈ-ಕಾಲು ಮುಚ್ಚುವಂತಹ ಬಟ್ಟೆಗಳನ್ನು ಧರಿಸಿಕೊಂಡು, ಸೊಳ್ಳೆ ನಿವಾರಕವನ್ನು ಹಚ್ಚಿಕೊಂಡು ಬರಬೇಕು. ಡೆಂಘೆ ನಿಯಂತ್ರಣ ಕ್ರಮಗಳ ಬಗ್ಗೆ ಶಾಲೆಯ ಸೂಚನಾ ಫಲಕದಲ್ಲಿ ಮಾಹಿತಿ ಪ್ರಕಟಿಸಿ ಅನುಸರಿಸಲು ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದ್ದಾರೆ.

ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಎಸ್‌ಡಿಎಂಸಿಗಳ ಸಹಕಾರದೊಂದಿಗೆ ಮಕ್ಕಳಿಗೆ ಸೊಳ್ಳೆ ನಿವಾರಕಗಳನ್ನು ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ಪೂರೈಸಲು ಕ್ರಮ ವಹಿಸಬೇಕು. ಶಾಲಾ ಆವರಣ ಹಾಗೂ ಅಕ್ಕಪಕ್ಕದ ಖಾಲಿ ನಿವೇಶನಗಳಲ್ಲಿ ಘನತ್ಯಾಜ್ಯ ಸಂಗ್ರಹವಾಗದಂತೆ ಕ್ರಮ ವಹಿಸಬೇಕು. ಅಗತ್ಯ ಬಿದ್ದಲ್ಲಿ ಸ್ಥಳಿಯ ಆಡಳಿತದ ಸಹಕಾರ ಪಡೆಯಬೇಕು. ಶುದ್ಧ ನೀರಿನ ಸಂಗ್ರಹಣಾ ಪರಿಕರಗಳನ್ನು ಭದ್ರವಾಗಿ ಮುಚ್ಚಬೇಕು. ಕಡ್ಡಾಯವಾಗಿ ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಶಾಲಾ ಮೇಲ್ಚಾವಣಿ, ಹೂವಿನ ಕುಂಡಗಳು, ಆಡದ ಮೈದಾನ, ಕೈತೋಟ ಸೇರಿದಂತೆ ಶಾಲಾ ಆವರಣದಲ್ಲಿ ಎಲ್ಲೂ ಕೂಡ ನೀರು ಶೇಖರಣೆಯಾಗದಂತೆ ಕ್ರಮ ವಹಿಸಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಡೆಂಘೆ ಜ್ವರ ನಿಯಂತ್ರಣ ಕುರಿತು ಬೆಳಗಿನ ಪ್ರಾರ್ಥನೆಯ ಅವಧಿಯಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ಪೋಷಕರಿಗೂ ವಾಟ್ಸ್‌ಅಪ್ ಮೂಲಕ ಮಾಹಿತಿ ಹಂಚಬೇಕು ಎಂದು ತಿಳಿಸಿದ್ದಾರೆ.

ಡೆಂಘೆ ತೀವ್ರತೆ ಬಗ್ಗೆ ನಿರ್ಲಕ್ಷಿಸಬೇಡಿ

ಸಾಮಾನ್ಯ ಡೆಂಘೆ ಜ್ವರ ಪ್ರಕರಣಗಳು ಅಗತ್ಯ ಚಿಕಿತ್ಸೆ , ಹೆಚ್ಚು ದ್ರವಾಹಾರ ಸೇವನೆ ಮತ್ತು ಹೆಚ್ಚು ವಿಶ್ರಾಂತಿ ಪಡೆಯುವುದರಿಂದ ಗುಣಮುಖಗಾಗುತ್ತದೆ. ಆದರೆ, ಜ್ವರ ಗುಣಮುಖವಾಗಿ 3-4 ದಿನಗಳ ನಂತರ ತೀವ್ರ ಹೊಟ್ಟೆನೋವು, ವಾಂತಿ, ಅತಿಸಾರ, ಸುಸ್ತು, ತಲೆ ಸುತ್ತು, ಕಣ್ಣು ಕತ್ತಲೆ ಬರುವುದು. ಚರ್ಮ ಬಿಳುಚುವಂತಹ ಲಕ್ಷಣಗಳು ಕಂಡುಬಂದಲ್ಲಿ ಇವು ತೀವ್ರ ಡೆಂಘೆ ಜ್ವರದ ಲಕ್ಷಣಗಳಾಗಿದ್ದು ತಕ್ಷಣ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಗೆ ಕ್ರಮ ವಹಿಸಬೇಕು.