ಜಿಲ್ಲೆ

ಆರೋಗ್ಯ ವಿವಿಯಲ್ಲಿ 25 ಹೊಸ ಕೋರ್ಸ್ ಆರಂಭ

kumarvrl

ಬೆಂಗಳೂರು: ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 25ನೇ ವರ್ಷಾಚರಣೆ ಅಂಗವಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ 25 ಹೊಸ ಕೋರ್ಸ್​ಗಳನ್ನು ಆರಂಭಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಜಯನಗರದಲ್ಲಿರುವ ವಿಶ್ವವಿದ್ಯಾಲಯಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕುಲಪತಿಗಳು 23 ಕೋರ್ಸ್ ಗಳ ಪಟ್ಟಿ ಸಿದ್ಧಪಡಿಸಿದ್ದು, ಇನ್ನೆರಡು ಕೋರ್ಸ್​ಗಳ ನಿರ್ಧಾರ ಆಗಬೇಕಿದೆ. ಜೂ.1 ರಂದು ನಡೆಯಲಿರುವ ವಿವಿಯ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಅವನ್ನು ಘೋಷಿಸಲಾಗುವುದು ಎಂದು ಹೇಳಿದರು.

ನೂತನ ಕೋರ್ಸ್​ಗಳ ಜತೆಗೆ ಅಮೆರಿಕ, ಇಂಗ್ಲೆಂಡ್ ಸೇರಿ ವಿವಿಧ ವಿದೇಶಿ ವಿವಿಗಳೊಂದಿಗೆ ಒಂದು ವರ್ಷದ ವಿನಿಮಯ ಕಾರ್ಯಕ್ರಮಗಳಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ನಮ್ಮ ವಿದ್ಯಾರ್ಥಿಗಳು ವಿಶೇಷ ಜ್ಞಾನ ಪಡೆಯುವ ಮೂಲಕ ರಾಜ್ಯದಲ್ಲಿ ಸೇವೆ ಸಲ್ಲಿಸಲು ಅನುಕೂಲವಾಗಲಿದೆ ಎಂದರು.

ನರ್ಸಿಂಗ್ ಕೋರ್ಸ್ ಫಲಿತಾಂಶ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ಎರಡನೇ ವರ್ಷದ 20 ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಕಳೆದು ಹೋಗಿದ್ದರಿಂದ ಫಲಿತಾಂಶ ಪ್ರಕಟವಾಗದ ವಿದ್ಯಾರ್ಥಿಗಳು ಹಾಗೂ ಪಾಲಕರ ಅಹವಾಲು ಸ್ವೀಕರಿಸಿದ ಸಚಿವರು, ಕಳೆದು ಹೋಗಿದ್ದ ಉತ್ತರ ಪತ್ರಿಕೆಗಳ ಬಂಡಲ್ ದೊರೆತಿದೆ ಹೀಗಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ. ಮುಂದಿನ 4-5 ದಿನಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಸಮಾಧಾನಪಡಿಸಿದರು.

ವರದಿ ನಂತರ ಶುಲ್ಕ ನಿಗದಿ

ವೈದ್ಯಕೀಯ ಕೋರ್ಸ್​ಗಳ ಶುಲ್ಕ ಹೆಚ್ಚಳ ಕುರಿತು ಧಾರ್ವಿುಕ ಮತ್ತು ಅಲ್ಪಸಂಖ್ಯಾತ ವಿದ್ಯಾಸಂಸ್ಥೆಗಳೊಂದಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಶುಲ್ಕ ನಿಯಂತ್ರಣ ಸಮಿತಿ ಕೂಡ ರಚಿಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ನಂತರ ಶುಲ್ಕ ಹೆಚ್ಚಳ ಕುರಿತು ವಿಸõತ ಚರ್ಚೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಡಾ.ಸುಧಾಕರ್ ಹೇಳಿದರು.

ರಾಮನಗರದಲ್ಲಿ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕಚೇರಿ ಆರಂಭಿಸುವ ಸಂಬಂಧ ಮುಂದಿನ ವಾರ ಅಧಿಕಾರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಅಲ್ಲಿ ರ್ಚಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. | ಡಾ. ಕೆ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ