ಮೂಡಿಗೆರೆಯಲ್ಲಿ ಜೆ.ಎಂ.ರಸ್ತೆ ಬಡಾವಣೆಯ 10ನೇ ವಾರ್ಡ್ ಒಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ನಯನಾ ಮೋಟಮ್ಮ ಗುದ್ದಲಿಪೂಜೆ ನೆರವೇರಿಸಿದರು. ಕೆ.ವೆಂಕಟೇಶ್, ಎಚ್.ಪಿ.ರಮೇಶ್, ಎಂ.ಎಹಂಝ, ಖುರ್ಷಿದಾಬಾನು ಇತರರಿದ್ದರು. 
ಜಿಲ್ಲೆ

25 ಲಕ್ಷ ರೂ. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ

ಮೂಡಿಗೆರೆ: ರಾಜ್ಯಸಭಾ ಸದಸ್ಯ ಜಯರಾಮ್ ರಮೇಶ್ ಅವರು ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ 25 ಲಕ್ಷ ರೂ. ಅನುದಾನ ನೀಡಿದ್ದಾರೆ. ಅದರಲ್ಲಿ 8 ಮತ್ತು 10ನೇ ವಾರ್ಡ್ ರಸ್ತೆಗಳನ್ನು ಕಾಂಕ್ರಿಟೀಕರಣಗೊಳಿಸಲಾಗವುದು ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.

ಗುರುವಾರ ಪಟ್ಟಣದ ಜೆ.ಎಂ.ರಸ್ತೆ ಬಡಾವಣೆಯ 10ನೇ ವಾರ್ಡ್‌ನ ಒಳರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಪಟ್ಟಣದ ವಿವಿಧ ಬಡಾವಣೆ ರಸ್ತೆಗಳಿಗೆ ಈ ಹಿಂದೆ ಹಾಕಿದ್ದ ಟಾರ್ ಕಿತ್ತುಹೋಗಿ ವಾಹನಗಳು ಸಂಚರಿಸಲು ಆಗದ ಪರಿಸ್ಥಿತಿ ಇದೆ. ಪಪಂಗೆ ಸರ್ಕಾರ ಬಿಡುಗಡೆ ಮಾಡಿರುವ 5 ಕೋಟಿ ರೂ. ಅನುದಾನದಲ್ಲಿ 3.5 ಕೋಟಿ ರೂ. ವಿವಿಧ ರಸ್ತೆಗಳ ಅಭಿವೃದ್ಧಿಗೆ ಮೀಸಲಿರಿಸಿ ಕ್ರಿಯಾಯೋಜನೆ ತಯಾರಿಸಲಾಗಿದೆ. ಎಸ್‌ಬಿಐ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಛತ್ರ ಮೈದಾನ, ಕುರುಕಮಕ್ಕಿ, ದೊಡ್ಡಿಬೀದಿ, ಜೆ.ಎಂ.ರಸ್ತೆ ಸೇರಿದಂತೆ ವಿವಿಧ ಬಡಾವಣೆ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲು 19.5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಸದ್ಯದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಎಲ್ಲ 11 ವಾರ್ಡ್‌ಗಳಲ್ಲಿ ಹಳೆಯ ಪೈಪ್‌ಗಳನ್ನು ತೆರವುಗೊಳಿಸಿ ಹೊಸ ಪೈಪ್ ಅಳವಡಿಸಲಾಗುವುದು. ಹೊಸ ಪಂಪ್‌ಸೆಟ್ ಖರೀದಿಸಿ ಅಳವಡಿಸಲಾಗುವುದು. ದೊಡ್ಡಿ ಬೀದಿಯಲ್ಲಿರುವ ಓವರ್ ಹೆಡ್ ನೀರಿನ ಟ್ಯಾಂಕ್ ತೆರವುಗೊಳಿಸಿ ಹೊಸ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುವುದು. 8 ವರ್ಷದ ಹಿಂದೆ ಪಟ್ಟಣದ ಕುಡಿಯುವ ನೀರಿನ ಎಕ್ಸ್‌ಪ್ರೆಸ್ ಪೈಪ್‌ಲೈನ್ ಯೋಜನೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿತ್ತು. ಅದರ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅದನ್ನು ಪೂರ್ಣಗೊಳಿಸಲು 1 ಕೋಟಿ ರೂ. ಅನುದಾನದ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಸದ್ಯದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದುವರಿದ ಕಾಮಗಾರಿಗಾಗಿ ಇನ್ನೂ 25 ಲಕ್ಷ ರೂ. ಅನುದಾನವಿದೆ. ಅದರ ಟೆಂಡರ್ ಪ್ರಕ್ರಿಯೆ ಸದ್ಯದಲ್ಲಿ ನಡೆಯಲಿದೆ. ಇನ್ನು 3 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಚಿಕ್ಕಮಗಳೂರಿನ ಮೂಗ್ತಿಹಳ್ಳಿಯಿಂದ ಮೂಡಿಗೆರೆ ಹ್ಯಾಂಡ್‌ಪೋಸ್ಟ್ ವೃತ್ತದವರೆಗೆ 30 ಕಿ.ಮೀ ರಾಷ್ಟ್ರೀಯ ಹೆದ್ದಾರಿ 173 ಅಗಲೀಕರಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಸದ್ಯದಲ್ಲೇ ಕೆ.ಎಂ.ರಸ್ತೆ ವಿಸ್ತರಣೆಯಾಗಲಿದೆ. ಎಂ.ಜಿ.ರಸ್ತೆ ಅಗಲೀಕರಣಕ್ಕೆ ಈ ಹಿಂದೆಯೆ ಚಾಲನೆ ನೀಡಲಾಗಿತ್ತು. ಸ್ಥಳೀಯರ ವಿರೋಧದಿಂದ ಕಾಮಗಾರಿ ಸ್ಥಗಿತಗೊಂಡಿದೆ. ಎಂ.ಜಿ.ರಸ್ತೆ ವರ್ತಕರು ಮತ್ತು ಕಟ್ಟಡ ಮಾಲೀಕರ ಸಭೆ ನಡೆಸಲಾಗುವುದು. ಕಟ್ಟಡ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಸ್ತೆ ಅಗಲೀಕರಣ ನಡೆಸಲಾಗುವುದು ಎಂದು ತಿಳಿಸಿದರು.
ಪಪಂ ಸದಸ್ಯರಾದ ಕೆ.ವೆಂಕಟೇಶ್, ಎಚ್.ಪಿ.ರಮೇಶ್, ಎಂ.ಎ.ಹಂಝ, ಖುರ್ಷಿದಾ ಭಾನು, ಪಪಂ ಮುಖ್ಯಾಧಿಕಾರಿ ರಂಗಸ್ವಾಮಿ, ಕೆಆರ್‌ಐಡಿಎಲ್ ಎಇಇ ಉಮೇಶ್ ನಾಯ್ಕ, ಪಪಂ ಮಾಜಿ ಅಧ್ಯಕ್ಷೆ ಜಯಮ್ಮ, ಮುಖಂಡರಾದ ಸಿ.ಬಿ.ಶಂಕರ್, ಯಾಕುಬ್ ಗೋಣಿಗದ್ದೆ, ಖಾಲಿದ್, ಫಿಶ್ ಮೋಣು, ಸುರೇಂದ್ರ, ಕಣಚೂರು ದೀಕ್ಷಿತ್ ಇತರರಿದ್ದರು.