ಜಿಲ್ಲೆ

25 ಕೋಟಿ ರೂ. ನಿವ್ವಳ ಲಾಭ ಗಳಿಸುವ ಗುರಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಬ್ಯಾಂಕ್​ ವರ್ಷದಿಂದ ವರ್ಷಕ್ಕೆ ಲಾಭದಲ್ಲಿ ಮುನ್ನಡೆಯುತ್ತಿದ್ದು, ಈ ವರ್ಷ 25 ಕೋಟಿ ರೂ. ನಿವ್ವಳ ಲಾಭ ಗಳಿಸುವ ಗುರಿ ಹೊಂದಲಾಗಿದೆ. ಈ ಗುರಿ ಸಾಧನೆಗೆ ಎಲ್ಲರೂ ಸೇರಿ ಶ್ರಮವಹಿಸಬೇಕಿದೆ ಎಂದು ಕೆಸಿಸಿ ಬ್ಯಾಂಕ್​ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು.
ನಗರದ ಜೆಎಸ್​ಎಸ್​ ಸಂಸ್ಥೆ ಆವರಣದಲ್ಲಿನ ಸನ್ನಿಧಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕೆಸಿಸಿ ಬ್ಯಾಂಕಿನ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅವಿಭಜಿತ ಧಾರವಾಡ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಬ್ಯಾಂಕ್​ ಕ್ರೋಢಿಕರಿಸಿದ ಠೇವು ಮತ್ತು ಇತರೆ ಸಂಪನ್ಮೂಲಗಳಿಂದ ನಬಾರ್ಡ್​ ಮತ್ತು ಅಪೆಕ್ಸ್​ ಬ್ಯಾಂಕ್​ಗಳ ಪುನರ್ಧನ ಸಾಲ ಸೌಲಭ್ಯಗಳಿಂದ ರೈತ ಸದಸ್ಯರಿಗೆ ಬೆಳೆಸಾಲ, ಮಾಧ್ಯಮಿಕ ಸಾಲ, ರೈತರ ಉಪ ಕಸುಬಗಳಿಗೆ ಕಿಸಾನ ಬಳಕೆ ಸಾಲ, ವ್ಯಾಪಾರಸ್ಥರಿಗೆ, ವೃತ್ತಿಪರರಿಗೆ ಕೃಷಿಯೇತರ ಸಾಲ, ಸ್ವಸಹಾಯ ಮತ್ತು ಜಂಟಿ ಬಾಧ್ಯತಾ ಗುಂಪುಗಳಿಗೆ ಸಾಲ ನೀಡುತ್ತಿದೆ. ಅಲ್ಲದೆ ಠೇವಣಾತಿಗಳ ಮೇಲೆ ಸ್ಪರ್ಧಾತ್ಮಕ ದರದಲ್ಲಿ ಬಡ್ಡಿ ನೀಡಲಾಗುತ್ತಿದೆ ಎಂದರು.
ವಸೂಲಾತಿ ಸಹ ಕಟ್ಟುನಿಟ್ಟಾಗಿ ನಡೆಸಿ ಬ್ಯಾಂಕಿನ ಬಂಡವಾಳ ವೃದ್ಧಿಗೆ ಕ್ರಮ ವಹಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಇನ್ನೂ ಹೆಚ್ಚಿನ ಆರ್ಥಿಕ ನೆರವು ಅಗತ್ಯವಿದ್ದು, ಸದಸ್ಯ ಸಂಘಗಳು ಬ್ಯಾಂಕಿನಲ್ಲೇ ಆರ್ಥಿಕ ವಹಿವಾಟು ನಡೆಸುವುದು ಸೇರಿ ಅಗತ್ಯ ಸಹಕಾರ ನೀಡಬೇಕು ಎಂದರು.
ಆಡಳಿತ ಮಂಡಳಿ ಸದಸ್ಯರು, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ವಿವಿಧ ಸಹಕಾರ ಸಂಘ -ಸಂಸ್ಥೆಗಳ ಪ್ರತಿನಿಧಿಗಳು, ಇತರರು ಇದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುನಿತಾ ಸಿದ್ರಾಮ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಎಸ್​.ವಿ. ಹೂಗಾರ ನಿರೂಪಿಸಿದರು. ನಿಂಗನಗೌಡ ಮರಿಗೌಡ್ರ ವಂದಿಸಿದರು.