ಜಿಲ್ಲೆ

ಎಸ್ಪಿ ಕಚೇರಿಗೂ ಕಾಲಿಟ್ಟ ಕರೊನಾ ; ಮೂವರು ಗರ್ಭಿಣಿಯರು ಸೇರಿ ಹೊಸದಾಗಿ 25 ಮಂದಿಗೆ ಸೋಂಕು

ತುಮಕೂರು: ಜಿಲ್ಲೆಯಲ್ಲಿ ಕರೊನಾ ಮತ್ತೊಂದು ಬಲಿ ಪಡೆದಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೂ ಸೋಂಕು ಕಾಲಿಟ್ಟಿದ್ದು ಸಹಜವಾಗಿ ಎಸ್ಪಿ ಸೇರಿ ಕಚೇರಿ ಸಿಬ್ಬಂದಿಗೆ ಆತಂಕ ಶುರುವಾಗಿದೆ. ಮೂವರು ಗರ್ಭಿಣಿಯರು ಸೇರಿ ಹೊಸದಾಗಿ 25 ಮಂದಿಗೆ ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 478ಕ್ಕೇರಿದೆ.

ಮಧುಗಿರಿ ಜೈನಬಸದಿ ಮುಂಭಾಗದ ಬೀದಿಯ 60 ವರ್ಷದ ವೃದ್ಧೆ ಸೋಂಕಿಗೆ ಬಲಿಯಾಗಿದ್ದಾರೆ. ಜ್ವರ, ಅತಿಯಾದ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದ ವೃದ್ಧೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ವೃದ್ಧೆ ವಾಸವಿದ್ದ 5 ನೇ ವಾರ್ಡ್ ಅನ್ನು ಪುರಸಭೆ ಸ್ಯಾನಿಟೈಸ್ ಮಾಡಿದೆ.

ತುಮಕೂರು ನಗರದಲ್ಲಿ 11, ತುರುವೇಕೆರೆ 7, ಪಾವಗಡ 3, ಕುಣಿಗಲ್ 2, ಕೊರಟಗೆರೆ ಹಾಗೂ ಮಧುಗಿರಿಯಲ್ಲಿ ತಲಾ 1 ಪ್ರಕರಣ ದಾಖಲಾಗಿದೆ. ಶಿರಾ, ಚಿಕ್ಕನಾಯಕನಹಳ್ಳಿ, ತಿಪಟೂರು ಹಾಗೂ ಗುಬ್ಬಿಯಲ್ಲಿ ಭಾನುವಾರ ಯಾವುದೇ ಪ್ರಕರಣ ದಾಖಲಾಗಿಲ್ಲ. 20 ಜನ ಗುಣಮುಖರಾಗಿ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 126 ಜನ ಗುಣ ಹೊಂದಿದ್ದಾರೆ. 6 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ಕರೊನಾದಿಂದ ಮೃತಪಟ್ಟವರ ಸಂಖ್ಯೆ 14ಕ್ಕೇರಿದೆ.

ಎಸ್ಪಿ ಕಚೇರಿಗೂ ಕಾಲಿಟ್ಟ ಕರೊನಾ: ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೂ ಕರೊನಾ ಕಾಲಿಟ್ಟಿದೆ. ಸ್ಪೆಷಲ್ ಬ್ರಾಂಚ್‌ನ 37 ವರ್ಷದ ಸಬ್ ಇನ್‌ಸ್ಪೆಕ್ಟರ್‌ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಪ್ರತಿನಿತ್ಯ ನೆಲಮಂಗಲದಿಂದ ಓಡಾಡುತ್ತಿದ್ದರು. ಸಹಜವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಸೇರಿ ಕಚೇರಿ ಸಿಬ್ಬಂದಿಗೆ ನಡುಕ ಉಂಟಾಗಿದೆ. ಭಾನುವಾರ ಎಲ್ಲರಿಗೂ ರಜೆ ನೀಡಿ ಇಡೀ ಕಚೇರಿ ಕಟ್ಟಡವನ್ನು ಸ್ಯಾನಿಟೈಸ್ ಮಾಡಿಸಲಾಗಿದೆ.

ಮತ್ತಿಬ್ಬರು ಕೆಎಸ್‌ಆರ್‌ಪಿ ಪೊಲೀಸರಿಗೂ ಸೋಂಕು ತಗುಲಿದೆ. 32 ವರ್ಷದ ಹಾಗೂ 33 ವರ್ಷದ ಕೆಎಸ್‌ಆರ್‌ಪಿ ಪೊಲೀಸರು ಬೆಂಗಳೂರಿನಲ್ಲಿ ಕರ್ತವ್ಯನಿರ್ವಹಿಸಿದ್ದು ಇಬ್ಬರಿಗೂ ಸೋಂಕು ದೃಢವಾಗಿದೆ. ಇಬ್ಬರು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 20 ಮಂದಿಯನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಸರಸ್ವತಿಪುರಂನ 51 ವರ್ಷದ ವ್ಯಕ್ತಿ, ವೀರಸಾಗರದ ಮುನ್ಸಿಪಲ್ ಕಚೇರಿಯಲ್ಲಿ ಕೆಲಸ ಮಾಡುವ 20 ವರ್ಷದ ಯುವಕನಿಗೆ, ಜ್ವರ, ಕೆಮ್ಮು ಕಾಣಿಸಿಕೊಂಡಿದ್ದ ಎಸ್‌ಐಟಿ ಬಡಾವಣೆಯ 20 ವರ್ಷದ ಯುವಕ, ಜ್ವರ, ಗಂಟಲು ನೋವು, ಕೆಮ್ಮು ಕಾಣಿಸಿಕೊಂಡ ಶಿರಾಗೇಟ್‌ನ 19 ವರ್ಷದ ಯುವಕ ಹಾಗೂ ಕೆಮ್ಮು, ಅತಿಯಾದ ರಕ್ತದೊತ್ತಡದಿಂದ ಬಳಲುತ್ತಿದ್ದ ಟಿಪ್ಪು ನಗರದ 67 ವರ್ಷದ ವೃದ್ಧನಿಗೆ ಸೋಂಕು ದೃಢಪಟ್ಟಿದೆ.

ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಪ್ತಗಿರಿ ಬಡಾವಣೆಯ 64 ವರ್ಷದ ವೃದ್ಧನಿಗೆ ನೆಗಡಿ, ಕೆಮ್ಮು ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತನ ಸಂಪರ್ಕಿತೆ ಎಸ್‌ಐಟಿ ಬಡಾವಣೆಯ 48 ವರ್ಷದ ಮಹಿಳೆಗೂ ಸೋಂಕು ದೃಢವಾಗಿದೆ. ಕೆಮ್ಮಿನಿಂದ ಬಳಲುತ್ತಿದ್ದ ಎಸ್‌ಐಟಿ ಬಡಾವಣೆಯ 64 ವರ್ಷದ ವೃದ್ಧ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದಾಗ ಸೋಂಕು ದೃಢಪಟ್ಟಿದೆ.

ಪಾವಗಡ 3 ಪ್ರಕರಣ: ಪಾವಗಡ ತಾಲೂಕಿನಲ್ಲಿ 3 ಪ್ರಕರಣ ಪತ್ತೆಯಾಗಿವೆ. ಜ್ವರ ಲಕ್ಷಣವಿದ್ದ ನ್ಯಾಯದಕುಂಟೆಯ 37 ವರ್ಷದ ವ್ಯಕ್ತಿ, ಗಂಟಲುನೋವು ಕಾಣಿಸಿಕೊಂಡಿದ್ದ ಗಂಗಸಾಗರದ 32 ವರ್ಷದ ವ್ಯಕ್ತಿ, ಕೆಂಚಗಾನಹಳ್ಳಿಯ 30 ವರ್ಷದ ವ್ಯಕ್ತಿಯಲ್ಲೂ ಸೋಂಕು ದೃಢಪಟ್ಟಿದೆ. ಕೊರಟಗೆರೆ ತಾಲೂಕಿನ ಸಿಂಗನಪಾಳ್ಯದ 28 ವರ್ಷದ ಗರ್ಭಿಣಿಗೆ ಸೋಂಕು ತಗುಲಿದೆ. 6 ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆಹಚ್ಚಿ, ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಕುಣಿಗಲ್ ತಾಲೂಕು ಬೀರಗಾನಹಳ್ಳಿಯ 53 ವರ್ಷದ ವ್ಯಕ್ತಿಗೆ ಜ್ವರ, ಕೆಮ್ಮು, ಮೈ-ಕೈನೋವಿನ ಹಿನ್ನೆಲೆಯಲ್ಲಿ ಎಡೆಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ತೆರಳಿದ್ದಾಗ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಂಕು ದೃಢಪಟ್ಟಿದ್ದು ನಾಲ್ವರು ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ 25 ವರ್ಷದ ಮಹಿಳೆಗೆ ಕೆಮ್ಮು ಕಾಣಿಸಿಕೊಂಡಿದ್ದು ಪರೀಕ್ಷೆಗೆ ಒಳಪಡಿಸಲಾಗಿತ್ತು.

8 ತಿಂಗಳ ಗರ್ಭಿಣಿಗೂ ಕರೊನಾ : ತುರುವೇಕೆರೆ ಪಟ್ಟಣ ಸೇರಿ ತಾಲೂಕಿನಾದ್ಯಂತ 7 ಕರೊನಾ ಪ್ರಕರಣ ಪತ್ತೆಯಾಗಿವೆ. ನಡುವಹಳ್ಳಿಯ 25 ವರ್ಷದ ತಾಯಿ ಹಾಗೂ 3 ವರ್ಷದ ಹೆಣ್ಣುಮಗು, ಹುಲಿಕೆರೆಯ 32 ವರ್ಷದ ವ್ಯಕ್ತಿ, ಸಂಗಲಾಪುರದ 34 ವರ್ಷದ ವ್ಯಕ್ತಿ, ಮುನಿಯೂರಿನ 35 ವರ್ಷದ ಮಹಿಳೆ, ಅತ್ತಿಕುಳ್ಳೆಪಾಳ್ಯದ 8 ತಿಂಗಳ ಗರ್ಭಿಣಿಗೂ ಕರೊನಾ ಬಿಡದೆ ಕಾಡಿದೆ. 28 ವರ್ಷದ ಗರ್ಭಿಣಿ ತುಮಕೂರಿನ ಇಎಸ್‌ಐ ಆಸ್ಪತ್ರೆಗೆ ತೆರಳಿದ್ದ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. ಪಟ್ಟಣದ ಬ್ಯಾಟರಾಯಸ್ವಾಮಿ ದೇವಸ್ಥಾನದ ಸಮೀಪದ 35 ವರ್ಷದ ವ್ಯಕ್ತಿಗೆ ಸೋಂಕು ದೃಢವಾಗಿದೆ.

ಕಚೇರಿ ಸಿಬ್ಬಂದಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಕಟ್ಟಡವನ್ನು ಸ್ಯಾನಿಟೈಸ್ ಮಾಡಿಸಲಾಗಿದೆ. ಕಚೇರಿಯನ್ನು ಸೀಲ್ ಡೌನ್ ಮಾಡಲಾಗುವುದು. ಡಾ.ಕೆ.ವಂಶಿಕೃಷ್ಣ ಜಿಲ್ಲಾ ಪೊಲೀಸ್ ಅಧೀಕ್ಷಕ