ಜಿಲ್ಲೆ

ಆಹಾರ ಉತ್ಪಾದನೆ ಹೆಚ್ಚಿದರೂ ನೀಗದ ದೇಶದ ಹಸಿವು : ಪದ್ಮಭೂಷಣ ಡಾ.ಟಿ. ರಾಮಸಾಮಿ ಕಳವಳ

ಮೈಸೂರು: ಆಹಾರ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನ ಪಡೆದರೂ ಆಹಾರ ವ್ಯರ್ಥ ಮಾಡುವುದರಲ್ಲಿ 3ನೇ ಸ್ಥಾನದಲ್ಲಿ ಇದೆ. ಪರಿಣಾಮ ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿವೃತ್ತ ಕಾರ್ಯದರ್ಶಿ ಪದ್ಮಭೂಷಣ ಡಾ.ಟಿ. ರಾಮಸಾಮಿ ಕಳವಳ ವ್ಯಕ್ತಪಡಿಸಿದರು.

ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯದ (ಸಿಎಫ್‌ಟಿಆರ್‌ಐ) ಸಂಸ್ಥಾಪನಾ ದಿನಾಚರಣೆಯಲ್ಲಿ ಶುಕ್ರವಾರ ಮಾತನಾಡಿ ದ ಅವರು, ಇತ್ತೀಚೆಗೆ ಬಿಡುಗಡೆಯಾದ ಜಾಗತಿಕ ಹಸಿವು ಶೂಚ್ಯಾಂಕದಲ್ಲಿ ಭಾರತ 107ನೇ ಸ್ಥಾನಕ್ಕೆ ಕುಸಿದಿದೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಹಾಗೂ ಶ್ರೀಲಂಕಾಕ್ಕಿಂತ ಭಾರತದಲ್ಲಿ ಹಸಿವಿನ ಪ್ರಮಾಣ ಹೆಚ್ಚಿದೆ. ಜನರ ಹಸಿವು ನೀಗಿಸಲು ಸರ್ಕಾರ ಹಾಗೂ ಸಿಎಫ್‌ಟಿಆರ್‌ಐ ನಂತಹ ಸಂಸ್ಥೆಗಳು ಶ್ರಮಿಸಬೇಕು ಎಂದು ಹೇಳಿದರು.

ದೇಶದಲ್ಲಿ 25 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಅಪೌಷ್ಟಿಕತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು ಗುರಿಯಾಗುತ್ತಿದ್ದಾರೆ. 2030 ರೊಳಗೆ ಹಸಿವು ಮುಕ್ತ ವಿಶ್ವ ನಿರ್ಮಾಣ ಮಾಡಬೇಕು ಎಂದು ವಿಶ್ವಸಂಸ್ಥೆ ಕರೆ ನೀಡಿದೆ. ಹಸಿವು ಮುಕ್ತ ವಿಶ್ವ ಹಾಗೂ ಹಸಿವು ಮುಕ್ತ ಭಾರತ ನಿರ್ಮಾಣ ಸುಲಭದ ಹಾದಿಯೇನು ಅಲ್ಲ. ಈ ಗುರಿ ಸಾಧನೆಗೆ ಎಲ್ಲರು ಒಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ದೇಶಕ್ಕೆ ಸ್ವಾತಂತ್ರೃ ದೊರೆತ ಸಂದರ್ಭ ದೇಶದ ಜನಸಂಖ್ಯೆ 33 ಕೋಟಿ ಇತ್ತು. ಇದೀಗ 138 ಕೋಟಿಗೆ ಏರಿಕೆ ಕಂಡಿದೆ. ಪ್ರಾರಂಭದ ದಿನಗಳಲ್ಲಿ ಆಹಾರಕ್ಕೆ ಭಾರತ ಸಾಕಷ್ಟು ಸಮಸ್ಯೆ ಎದುರಿಸಿತು. ಆದರೆ ಹಸಿರು ಕ್ರಾಂತಿಯ ಪರಿಣಾಮ ಹಾಗೂ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡ ಹಿನ್ನೆಲೆಯಲ್ಲಿ ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿ ರಾಷ್ಟ್ರವಾಗಿ ರೂಪುಗೊಂಡಿದೆ. ಆಹಾರ ಉತ್ಪಾದನೆ ಕ್ಷೇತ್ರದಲ್ಲಿ ಇಷ್ಟೆಲ್ಲ ಸಾಧನೆ ತೋರಿದರೂ ಭಾರತದಲ್ಲಿ ಕೋಟ್ಯಾಂತರ ಸಂಖ್ಯೆಯಲ್ಲಿ ಜನರು ಹಸಿವಿನಿಂದ ಬಳಲುತ್ತಿರುವುದು ಬೇಸರದ ಸಂಗತಿ. ಬಡ ವರ್ಗದವರಿಗೆ ಅಗತ್ಯ ಆಹಾರ ದೊರೆಯುವಂತೆ ಮಾಡಬೇಕು. ಚೀನಾದಲ್ಲಿ ಜನಸಂಖ್ಯೆ ಹೆಚ್ಚಿದ್ದರೂ ಅಲ್ಲಿನ ಜನರು ಆಹಾರವನ್ನು ಹೆಚ್ಚು ವ್ಯರ್ಥ ಮಾಡದೆ ಬಳಕೆ ಮಾಡುತ್ತಾರೆ. ಅದೇ ರೀತಿ ಭಾರತದಲ್ಲೂ ಆಹಾರ ವ್ಯರ್ಥವಾಗುವುದನ್ನು ತಡೆಯಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಸಿಎಫ್‌ಟಿಆರ್‌ಐ ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಇದ್ದರು.