ಜಿಲ್ಲೆ

ರಾಣೆಬೆನ್ನೂರ ಸರ್ಕಾರಿ ಆಸ್ಪತ್ರೆಗೆ 25 ಹೆಚ್ಚುವರಿ ಬೆಡ್

ರಾಣೆಬೆನ್ನೂರ: ತಾಲೂಕಾಸ್ಪತ್ರೆಗೆ ಆಕ್ಸಿಜನ್ ಬೆಡ್​ಗಳ ಅವಶ್ಯಕತೆಯಿದ್ದು, ಕೂಡಲೆ 25 ಆಕ್ಸಿಜನ್ ಬೆಡ್​ಗಳನ್ನು ಹೆಚ್ಚಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ತಾಲೂಕಾಸ್ಪತ್ರೆಗೆ ಗುರುವಾರ ಭೇಟಿ ನೀಡಿ, ಕೋವಿಡ್ ರೋಗಿಗಳ ವಿಭಾಗ ಪರಿಶೀಲಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ 579 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 93 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 283 ಜನರು ಹೋಮ್ ಐಸೋಲೇಷನ್​ನಲ್ಲಿದ್ದಾರೆ. ಆದರೆ, ಮುಂದಿನ ದಿನದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾದರೆ ತೊಂದರೆ ಉಂಟಾಗಲಿದೆ. ಆದ್ದರಿಂದ ಆಸ್ಪತ್ರೆಯಲ್ಲಿ 25 ಹೆಚ್ಚುವರಿ ಆಕ್ಸಿಜನ್ ಬೆಡ್​ಗಳನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಾಮಾನ್ಯ ರೋಗಿಗಳಿಗೆ ಮೀಸಲಿಟ್ಟ ಬೆಡ್​ಗಳನ್ನು ಅವಶ್ಯಕತೆ ಬಿದ್ದರೆ ಕರೊನಾ ಸೋಂಕಿತರಿಗೆ ಬಳಸಿಕೊಳ್ಳಲು ತಿಳಿಸಿದ್ದೇನೆ ಎಂದರು.
ಹೋಮ್ ಐಸೋಲೇಷನ್​ನಲ್ಲಿರುವ ಕರೊನಾ ಲಕ್ಷಣವುಳ್ಳವರು ಏಕಾಏಕಿ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಎದುರಾದಾಗ ಆಸ್ಪತ್ರೆಗೆ ಬರುತ್ತಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೆ, ಹೋಮ್ ಐಸೋಲೇಷನ್​ನಿಂದ ಸೋಂಕು ಹೆಚ್ಚಲು ಕಾರಣವಾಗಿದೆ. ಆದ್ದರಿಂದ ಹೋಮ್ ಐಸೋಲೇಷನ್​ದಲ್ಲಿದ್ದವರು ಕೂಡಲೆ ಕರೊನಾ ಕೇರ್ ಸೆಂಟರ್​ಗೆ ಬರಬೇಕು. ಅಲ್ಲಿ ಅವರಿಗೆ ರೋಗದ ಲಕ್ಷಣವಿದ್ದರೆ ತಕ್ಷಣ ಚಿಕಿತ್ಸೆ ನೀಡುವ ಕೆಲಸವಾಗುತ್ತದೆ. ಉತ್ತಮ ಆಹಾರ, ಉಳಿದುಕೊಳ್ಳಲು ಬೆಡ್ ಸೇರಿ ಎಲ್ಲ ರೀತಿಯ ವ್ಯವಸ್ಥೆಯನ್ನು ಕರೊನಾ ಕೇರ್ ಸೆಂಟರ್​ನಲ್ಲಿ ಮಾಡಲಾಗಿದೆ ಎಂದರು.
ಕರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಕಾರಣ ಆಕ್ಸಿಜನ್ ಬೇಡಿಕೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದ್ದರಿಂದ ಕುಮಾರಪಟ್ಟಣದ ಗ್ರಾಸೀಂ ಫ್ಯಾಕ್ಟರಿಯಿಂದ ಆಕ್ಸಿಜನ್ ತರಿಸಿಕೊಳ್ಳಲಾಗುತ್ತಿದೆ. ಆದರೆ, ಅದು ಸಾಕಾಗದ ಕಾರಣ ಖಾಸಗಿ ವಿತರಕರ ಜತೆ ಮಾತನಾಡಿ ಆಕ್ಸಿಜನ್ ವ್ಯವಸ್ಥೆ ಮಾಡಲಾಗುವುದು ಎಂದರು.
ಅಧಿಕಾರಿಗಳ ವಿರುದ್ಧ ಗರಂ ಆದ ಸಚಿವರು: ಜಿಲ್ಲೆಯಲ್ಲಿ ಹೋಮ್ ಐಸೋಲೇಷನ್ ಬಂದ್ ಮಾಡಿ ಎಲ್ಲರನ್ನು ಕರೊನಾ ಕೇರ್ ಸೆಂಟರ್​ಗೆ ದಾಖಲಿಸಲು ಸೂಚಿಸಿ ಒಂದು ತಿಂಗಳು ಕಳೆದಿದೆ. ಇನ್ನೂ ಏಕೆ ಮಾಡಿಲ್ಲ ಎಂದು ಸಚಿವ ಬೊಮ್ಮಾಯಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ‘ಹೋಮ್ ಐಸೋಲೇಷನ್​ನಿಂದ ಸೋಂಕು ಜಾಸ್ತಿ ಆಗುತ್ತಿದೆ. ಸರ್ಕಾರದ ಆದೇಶ ಫಾಲೋ ಮಾಡಲು ಆಗಲ್ವಾ ನಿಮಗೆ’ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೆ ಎಲ್ಲರನ್ನು ಕರೊನಾ ಕೇರ್ ಸೆಂಟರ್​ಗೆ ಕರೆತರಬೇಕು. ಅಲ್ಲಿ ಎರಡು ಶಿಫ್ಟ್​ನಲ್ಲಿ ವೈದ್ಯರು, ಸಿಬ್ಬಂದಿ ನೇಮಕ ಮಾಡಿ 24 ಗಂಟೆ ಸೋಂಕಿತರ ಮೇಲೆ ನಿಗಾ ವಹಿಸಬೇಕು. ಏಳೆಂಟು ಪ್ರಕರಣ ಕಂಡುಬಂದ ಬಡಾವಣೆಗಳನ್ನು ಸಿಗ್ಮಾ ಕಂಟೇನ್ಮೆಮೆಂಟ್ ಜೋನ್ ಮಾಡಬೇಕು. ವೈದ್ಯರೇ ಸೋಂಕಿತರ ಮನೆಗೆ ತೆರಳಿ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕು. ಅವರಲ್ಲಿ ರೋಗ ನಿರೋಧಕಶಕ್ತಿ ಹೆಚ್ಚಿಸಬೇಕು. ಇದನ್ನು ಮಾಡಲಿಲ್ಲವೆಂದರೆ ಯಾರು ಜವಾಬ್ದಾರಿ ತೆಗೆದುಕೊಂಡಿರುತ್ತಾರೋ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಚಿವ ಆರ್. ಶಂಕರ, ಸಂಸದ ಶಿವಕುಮಾರ ಉದಾಸಿ, ಶಾಸಕ ಅರುಣಕುಮಾರ ಪೂಜಾರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಜಿಪಂ ಸಿಇಒ ಮಹ್ಮದ ರೋಷನ್, ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಆಯುಕ್ತ ಡಾ. ಎನ್. ಮಹಾಂತೇಶ, ಟಿಎಚ್​ಒ ಡಾ. ಸಂತೋಷಕುಮಾರ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗೋವಿಂದ ಯು., ಎನ್​ಡ್ಲ್ಯುಕೆಎಸ್​ಆರ್​ಟಿಸಿ ಉಪಾಧ್ಯಕ್ಷ ಬಸವರಾಜ ಕೇಲಗಾರ ಮತ್ತಿತರರಿದ್ದರು.