ಜಿಲ್ಲೆ

24ರಿಂದ ಎರಡು ದಿನ ಚಾಮುಂಡಿಬೆಟ್ಟದಲ್ಲಿ ಮಹಿಷ ದಸರಾ

ಮೈಸೂರು: ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ಮಹಿಷ ದಸರಾ ಕಾರ್ಯಕ್ರಮವನ್ನು ಸೆ.24 ಮತ್ತು 25ರಂದು ಚಾಮುಂಡಿಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ.

24ರಂದು ಬೆಳಗ್ಗೆ 10ಕ್ಕೆ ಬೆಟ್ಟದಲ್ಲಿರುವ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಲಾಗುವುದು. 25ರಂದು ಮಹಿಷ ದಸರಾದ ಸಭಾ ಕಾರ್ಯಕ್ರಮ ನಡೆಯಲಿದೆ. ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್‌ಚಂದ್ರಗುರು ಸೇರಿದಂತೆ ಸಾಹಿತಿಗಳು, ಬುದ್ಧಿಜೀವಿಗಳು, ಪ್ರಗತಿಪರರು ಪಾಲ್ಗೊಳ್ಳಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.

ಕಳೆದ 8 ವರ್ಷದಿಂದ ಮಹಿಷ ದಸರಾ ಆಚರಿಸಲಾಗುತ್ತಿದೆ. ಆದರೆ 2019ರಿಂದ ಈ ಕಾರ್ಯಕ್ರಮಕ್ಕೆ ಕೆಲ ಜನಪ್ರತಿನಿಧಿಗಳು, ಜಿಲ್ಲಾಡಳಿತ ಮತ್ತು ಸರ್ಕಾರ ಅಡ್ಡಿಪಡಿಸುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಕಾರ್ಯಕ್ರಮ ಆಯೋಜನೆಗೆ ಯಾವ ದೊಣ್ಣೆನಾಯಕನ ಅಪ್ಪಣೆ ಬೇಕಿಲ್ಲ. ಇಷ್ಟಾಗಿಯೂ ಅಡ್ಡಿಪಡಿಸಿದರೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು.

ಚಾಮುಂಡಿಬೆಟ್ಟದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ಅವರಿಗೆ ಒಂದು ಕಾನೂನು, ನಮಗೆ ಒಂದು ಕಾನೂನೇ? ಮಹಿಷ ದಸರಾ ಆಚರಣೆ ಮಾಡುವವರ ವಿರುದ್ಧ ಪೊಲೀಸರು ದಬ್ಬಾಳಿಕೆ ಮಾಡುತ್ತಾರೆ. ಆದರೆ, ಈ ಸಲ ಚಾಮುಂಡಿಬೆಟ್ಟದಲ್ಲೇ ಕಾರ್ಯಕ್ರಮ ನಡೆಸಲು ದೃಢ ಸಂಕಲ್ಪ ಮಾಡಲಾಗಿದೆ ಎಂದರು.

ಲಂಚ ಪಡೆದ ಆರೋಪದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆದ್ದರಿಂದ ಸಚಿವ ಸ್ಥಾನದಿಂದ ಇವರನ್ನು ವಜಾಗೊಳಿಸಿಬೇಕು. ನಾಡಹಬ್ಬ ಮೈಸೂರು ದಸರಾ ಮಹೋತ್ಸವದಿಂದ ಅವರನ್ನು ದೂರ ಇಡಬೇಕು ಎಂದು ಆಗ್ರಹಿಸಿದರು.
ಸಚಿವರ ವಿರುದ್ಧ ಗಂಭೀರ ಆರೋಪ ಇದೆ. ಇವರಿಗೆ ದಸರಾ ನಡೆಸಲು ನೈತಿಕತೆ ಇದೆಯೇ? ಆದರೆ, ಈವರೆಗೆ ಅವರ ರಾಜೀನಾಮೆ ಪಡೆದಿಲ್ಲ. ಬದಲಿಗೆ ಅವರ ನೇತೃತ್ವದಲ್ಲಿ ದಸರಾ ನಡೆಸಲಾಗುತ್ತಿದೆ. ಇವರಿಗೆ ಮತ್ತು ಸರ್ಕಾರಕ್ಕೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ದಲಿತ ಸಮುದಾಯದ ಡಿಸಿಪಿ ಪ್ರದೀಪ್ ಗುಂಟಿ ಅವರನ್ನು ದಸರಾ ಕಾರ್ಯಕ್ರಮದಿಂದ ದೂರ ಇಡುವ ಮೂಲಕ ಜಾತಿ ತಾರತಮ್ಯ ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಆಗಿರುವ ಪ್ರದೀಪ್ ಗುಂಟಿ ಅವರನ್ನು ದಸರಾದ ಯಾವುದೇ ಉಪಸಮಿತಿಗಳಲ್ಲಿ ಸೇರಿಸಿಲ್ಲ. ಜತೆಗೆ, ದಸರಾ ಯಾವ ಕಾರ್ಯಕ್ರಮದಲ್ಲೂ ಸೇರಿಸಿಕೊಂಡಿಲ್ಲ. ನಾಡಹಬ್ಬಕ್ಕೂ ಬಳಸಿಕೊಳ್ಳುತ್ತಿಲ್ಲ. ಇದು ಪೊಲೀಸ್ ಇಲಾಖೆಯಲ್ಲಿರುವ ಜಾತಿ ತಾರತಮ್ಯಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ಸೇವೆ ಕಾಯಂ ಮಾಡುವ ವಿಷಯದಲ್ಲಿ ರಾಜ್ಯ ಸರ್ಕಾರವು ಗುತ್ತಿಗೆ ಪೌರಕಾರ್ಮಿಕರ ಅನ್ಯಾಯ ಮಾಡಿದೆ. ರಾಜ್ಯದ ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ದೀರ್ಘ ಕಾಲದಿಂದ ಕಾರ್ಯನಿರ್ವಹಿಸುತ್ತಿರುವ 11,133 ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡುವ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಆದರೆ, ರಾಜ್ಯದಲ್ಲಿ 33 ಸಾವಿರ ಗುತ್ತಿಗೆ ಪೌರಕಾರ್ಮಿಕರಿದ್ದಾರೆ. ಉಳಿದವರ ಗತಿ ಏನು? ಪೌರಕಾರ್ಮಿಕರಲ್ಲಿ ಅಸಮಾಧಾನ, ಗುಂಪುಗಾರಿಕೆ ಸೃಷ್ಟಿಸಲು ಸರ್ಕಾರವೇ ಮುಂದಾಗಿದೆ ಎಂದು ಆರೋಪಿಸಿದರು.
ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿದರು.