ಚಿತ್ರದುರ್ಗ: ಜಿಲ್ಲಾದ್ಯಂತ 98 ಕೇಂದ್ರಗಳಲ್ಲಿ ಪ್ರಥಮ ಭಾಷೆ ಕನ್ನಡ ವಿಷಯದೊಂದಿಗೆ ಶುಕ್ರವಾರ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ವಿದ್ಯಾರ್ಥಿ ಸಮೂಹದಲ್ಲಿ ಎಲ್ಲಿಲ್ಲದ ಉತ್ಸಾಹ ಕಂಡುಬಂದಿತು. 21,669 ವಿದ್ಯಾರ್ಥಿಗಳು ಹಾಜರಾಗಿ, 248 ಮಂದಿ ಗೈರಾಗಿದ್ದರು.
ಮೊದಲ ದಿನದ ಪರೀಕ್ಷೆಗೆ ಹೊಸಬರ ಪೈಕಿ 21,887 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, ಅದರಲ್ಲಿ 241 ಗೈರಾಗಿ, 21,646 ಮಂದಿ ಹಾಜರಾಗಿದ್ದರು.
ಅದೇ ರೀತಿ ಪುನರಾವರ್ತಿತ 30ರ ಪೈಕಿ 7 ಮಂದಿ ಗೈರಾಗಿ, ಇನ್ನುಳಿದ 23 ವಿದ್ಯಾರ್ಥಿಗಳು ಬರೆದರು. 464 ಖಾಸಗಿ ಪೈಕಿ 399 ಹಾಜರಾಗಿ, 65 ವಿದ್ಯಾರ್ಥಿಗಳು ಗೈರಾಗಿದ್ದರು.
ಶುಭ ಕೋರಿದ ಕುಟುಂಬ:
ಪರೀಕ್ಷೆಗೆ ತಯಾರಾಗಿ ಕೇಂದ್ರಕ್ಕೆ ಹೊರಡುತ್ತಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪಾಲಕರು, ಕುಟುಂಬದ ಸದಸ್ಯರು, ಸ್ನೇಹಿತರು, ನೆರೆಹೊರೆಯವರು ಶುಭ ಕೋರುತ್ತಿದ್ದ ದೃಶ್ಯ ಹಲವೆಡೆ ಕಂಡುಬಂದಿತು.
ವಿದ್ಯಾರ್ಥಿ ಸಮೂಹ 1 ಗಂಟೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರ ತಲುಪಿ ತಮ್ಮ ನೋಂದಣಿ ಸಂಖ್ಯೆ ಇರುವ ಕುರಿತು ಖಚಿತ ಪಡಿಸಿಕೊಂಡರು. ತಂದೆ-ತಾಯಿ, ಅಜ್ಜ-ಅಜ್ಜಿ ಕೈಹಿಡಿದುಕೊಂಡು ಕೇಂದ್ರದೊಳಗೆ ಬಿಟ್ಟು ಹೋಗುವ ದೃಶ್ಯ ಸಾಮಾನ್ಯವಾಗಿತ್ತು.
ಆಯಾ ಕೇಂದ್ರದ ಆವರಣದಲ್ಲಿ ವಿದ್ಯಾರ್ಥಿಗಳು ಕುಳಿತು ವಿಷಯಕ್ಕೆ ಸಂಬಂಧಿಸಿದಂತೆ ಸ್ನೇಹಿತರೊಂದಿಗೆ ಗುಂಪು ಚರ್ಚೆಯಲ್ಲಿ ತೊಡಗಿದರೆ, ಇನ್ನೂ ಕೆಲವರು ಅಭ್ಯಾಸದಲ್ಲಿ ಮಗ್ನರಾಗಿದ್ದರು. ಪರೀಕ್ಷಾ ಸಮಯದ ಕರೆಗಂಟೆ ಬಂದೊಡನೆ ಒಳಗೆ ಪ್ರವೇಶಿಸಿದರು.
*ಕೋಟ್
ಜಿಲ್ಲೆಯಲ್ಲಿ ಪರೀಕ್ಷೆ ಸಂಬಂಧ ಯಾವುದೇ ಅವ್ಯವಹಾರ ನಡೆದಿಲ್ಲ. ಯಾವ ವಿದ್ಯಾರ್ಥಿಗೂ ತೊಂದರೆ ಉಂಟಾಗಿಲ್ಲ. ಎಲ್ಲರೂ ಸುಲಲಿತವಾಗಿ ಪರೀಕ್ಷೆ ಬರೆದಿದ್ದಾರೆ.
ಕೆ.ರವಿಶಂಕರ್‌ರೆಡ್ಡಿ, ಡಿಡಿಪಿಐ