ಜಿಲ್ಲೆ

ಕರೊನಾ ಮುಕ್ತರ ಸಂಖ್ಯೆ ಹೆಚ್ಚಳ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ ಅತ್ಯಧಿಕ 641 ಮಂದಿ ಕರೊನಾ ಮುಕ್ತರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕರೊನಾ ಮುಕ್ತರಾದವರ ಸಂಖ್ಯೆ 6873ಕ್ಕೇರಿದೆ.

ಕೋವಿಡ್ ಕೇರ್ ಸೆಂಟರ್‌ಗಳಿಂದ 100, ಆಸ್ಪತ್ರೆಗಳಿಂದ 112 ಮಂದಿ ಬಿಡುಗಡೆಯಾದರೆ ಮನೆಯಲ್ಲೇ ಹೋಮ್ ಐಸೊಲೇಶನ್‌ನಲ್ಲಿದ್ದ 429 ಮಂದಿಯೂ ಕರೊನಾದಿಂದ ಗುಣವಾಗಿದ್ದಾರೆ.

ಗುರುವಾರ ವರದಿಯಾಗಿರುವ ಒಟ್ಟು 246 ಪಾಸಿಟಿವ್ ಪ್ರಕರಣಗಳಲ್ಲಿ 145 ಮಂದಿ ರೋಗ ಲಕ್ಷಣಗಳನ್ನು ಹೊಂದಿಲ್ಲ. 101 ಮಂದಿ ಮಾತ್ರ ಸೋಂಕಿನ ಲಕ್ಷಣ ಹೊಂದಿದ್ದಾರೆ. 150 ಮಂದಿಯೂ ಮಂಗಳೂರಿನವರಾಗಿದ್ದು ಬಂಟ್ವಾಳದ 47, ಪುತ್ತೂರಿನ 16, ಸುಳ್ಯದ 7, ಬೆಳ್ತಂಗಡಿಯ 15, ಇತರ ಜಿಲ್ಲೆಯ 11 ಮಂದಿ ಸೇರಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 8071 ತಲುಪಿದ್ದು, ಸಕ್ರಿಯ ಪ್ರಕರಣಗಳು 1948ಕ್ಕೆ ಇಳಿಕೆಯಾಗಿವೆ. ಗುರುವಾರ ಆರು ಮಂದಿ ಮೃತಪಟ್ಟಿರುವ ವರದಿ ಬಂದಿದ್ದು, ಒಟ್ಟು ಮೃತರ ಸಂಖ್ಯೆ 250ಕ್ಕೇರಿಕೆಯಾಗಿದೆ.

ಕಾಸರಗೋಡಿನಲ್ಲಿ 79

ಕಾಸರಗೋಡು: ಜಿಲ್ಲೆಯ 79 ಮಂದಿ ಒಳಗೊಂಡಂತೆ ಕೇರಳದಲ್ಲಿ 1,564 ಮಂದಿಯಲ್ಲಿ ಗುರುವಾರ ಕೋವಿಡ್-19 ಸೋಂಕು ಪತ್ತೆಯಾಗಿದೆ. ಮೂವರು ಮೃತಪಟ್ಟಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 28 ಮಂದಿ ಬಿಡುಗಡೆಯಾಗಿದ್ದು, 1,106 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.