ಚಿತ್ರದುರ್ಗ: ಹೊಳಲ್ಕೆರೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ಬೆಳಕಿಗೆ ಬಂದ 24 ತಾಸಿನೊಳಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದ್ದಾರೆ.
ಹೊಳಲ್ಕೆರೆ ತಾಲೂಕು ಕೆಂಗುಂಟೆ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಮಧ್ಯಾಹ್ನ ಮಹಿಳೆ ಶವ ಪತ್ತೆಯಾಗಿತ್ತು. ಹೊಳಲ್ಕೆರೆ ಖಾಸಗಿ ಶಾಲೆ ಬಸ್ಸಿನ ಆಯಾ ಆಗಿದ್ದ ರಾಮಘಟ್ಟದ ನಿವಾಸಿ ಆಶಾ(37)ಮೃತ ಮಹಿಳೆ. ಕಲ್ಲಿನಂಥ ಬಲವಾದ ವಸ್ತುವಿನಿಂದ ತಲೆಗೆ ಹೊಡೆದು ಆಕೆಯನ್ನು ಕೊಲೆ ಮಾಡಲಾಗಿತ್ತು.
ಕೊಲೆ ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತ್ತೆಗೆ ಸಿಪಿಐ ಎಂ.ಬಿ. ಚಿಕ್ಕಣ್ಣನವರ್ ನೇತೃತ್ವದಲ್ಲಿ ಪಿಎಸ್‌ಐ ಸಚಿನ್ ಪಟೇಲ್, ಚಿತ್ರಹಳ್ಳಿಗೇಟ್ ಠಾಣೆ ಪಿಎಸ್‌ಐ ಕಾಂತರಾಜ್ ಮತ್ತು ಚಿಕ್ಕಜಾಜೂರು ಠಾಣೆ ಪಿಎಸ್‌ಐ ನೇತ್ರಾವತಿ ಅವರನ್ನೊಳಗೊಂಡ 3 ತಂಡಗಳನ್ನು ರಚಿಸಲಾಗಿತ್ತು. ಜಾಡು ಹಿಡಿದ ಪೊಲೀಸರು ಆರೋಪಿ, ಕೊಡಗವಳ್ಳಿಯ ಮಂಜುನಾಥ್(24)ನನ್ನು ಬಂಧಿಸಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.