ಜಿಲ್ಲೆ

ಗೋಲ್ಡನ್ ಬುಕ್ ಆ್ ವರ್ಲ್ಡ್ ರೆಕಾರ್ಡ್ಸ್‌ಗೆ  24 ಗಂಟೆಗಳ ಕಾಲ ನಿರಂತರ ಹಾಡು - ಗಾಯಕ ಯಶವಂತ ಎಂ.ಜಿ ಅವರಿಂದ ವಿಶಿಷ್ಟ ಪ್ರಯತ್ನ

ಮಂಗಳೂರು: ಗಾನ ಗಂಧರ್ವ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನೋತ್ಸವದ ಅಂಗವಾಗಿ ಗಾಯಕ ಯಶವಂತ ಎಂ.ಜಿ. ಅವರಿಂದ 24 ಗಂಟೆಗಳ ಕಾಲ ನಿರರ್ಗಳವಾಗಿ ಗಾಯನ ಕಾರ‌್ಯಕ್ರಮ ಬಾಲಗಾನ ಯಶೋಯಾನ ಜೂ.3ರಂದು ಮಧ್ಯಾಹ್ನ3ಗಂಟೆಯಿಂದ ಜೂ.4ರ 3ರ ವರೆಗೆ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಮನಪಾ ಮಾಜಿ ಸದಸ್ಯ, ಗಾಯಕ ಜಗದೀಶ ಶೆಟ್ಟಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂ.3ರಂದು ಮಧ್ಯಾಹ್ನ 1.30ಕ್ಕೆ ವಿರಾಜಪೇಟೆಯ ಡಿವೈಎಸ್‌ಪಿ ಎಸ್.ಮಹೇಶ್ ಕುಮಾರ್ ಕಾರ‌್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದರ ನಡುವೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಜೂ.4ರಂದು 3 ಗಂಟೆಗೆ ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದೆ.

24 ಗಂಟೆಗಳ ನಿರಂತರ ಗಾಯನ: ಇದೊಂದು ಅಪೂರ್ವ ಕಾರ‌್ಯಕ್ರಮವಾಗಿದ್ದು, 24 ಗಂಟೆಗಳ ಕಾಲ ನಿರಂತರವಾಗಿ ಗಾಯಕ ಎಸ್‌ಪಿಬಿ ಅವರು ಹಾಡಿದ ಶೇ.90ರಷ್ಟು ಕನ್ನಡ ಚಿತ್ರಗೀತೆಗಳು, ಶೇ.5ರಷ್ಟು ಭಕ್ತಿ ಗೀತೆಗಳು ಹಾಗೂ ಶೇ.5ರಷ್ಟು ಭಾವಗೀತೆಗಳನ್ನು ಹಾಡಲಿದ್ದೇನೆ. ಇದಕ್ಕಾಗಿ ಅವರ 240ಕ್ಕಿಂತ ಹೆಚ್ಚಿನ ಹಾಡುಗಳನ್ನು ಸಿದ್ಧಮಾಡಿಕೊಂದ್ದೇನೆ. ಇದೊಂದು ವಿಶ್ವದಾಖಲೆಯಾಗುವ ಕಾರ‌್ಯಕ್ರಮ ಎಂದು ಗಾಯಕ ಯಶವಂತ ಎಂ.ಜಿ. ಹೇಳಿದರು.

ನಿರಂತರ ಗಾಯನದಲ್ಲಿ ಒಂದೊಂದು ಗಂಟೆಗೆ 5 ನಿಮಿಷಗಳ ವಿರಾಮ ಇರುತ್ತದೆ. ಬರೀ ಜ್ಯೂಸ್ ಕುಡಿದುಕೊಂಡೇ ಹಾಡುವ ಕೆಲಸ ಮಾಡುತ್ತೇನೆ. ನನ್ನ ಜತೆಯಲ್ಲಿ ಗಿಟಾರ್‌ನಲ್ಲಿ ರಾಜ್‌ಗೋಪಾಲ್, ಕೀಬೋರ್ಡ್‌ನಲ್ಲಿ ದೀಪಕ್ ಜಯಶೀಲನ್, ಡ್ರಮ್ಸ್ ಮತ್ತು ರಿದಂನಲ್ಲಿ ವಾಮನ್ ಕೆ, ತಬಲದಲ್ಲಿ ಪ್ರಜ್ವಲ್ ಆಚಾರ್ಯ, ಕೊಳಲಿನಲ್ಲಿ ವರ್ಷ ಬಸ್ರೂರ್ ಹಾಗೂ ಸಿತಾರ್‌ನಲ್ಲಿ ಸುಮುಖ್ ಆಚಾರ್ಯ ಭಾಗವಹಿಸಲಿದ್ದಾರೆ. ಈ ವಿಶ್ವದಾಖಲೆಯಲ್ಲಿ ಅವರು ಕೂಡ ಭಾಜನರಾಗುತ್ತಾರೆ. ಒಂದೊಂದು ಗಂಟೆ ಕೂತು ಒಂದೊಂದು ಗಂಟೆ ನಿಂತು ಹಾಡುವ ಯೋಜನೆ ಇಟ್ಟುಕೊಂಡಿದ್ದೇನೆ. ಈ ಸೋಲೋ ಹಾಡುಗಳ ಮೂಲಕ ಖ್ಯತ ಗಾಯಕ ಎಸ್‌ಪಿಬಿಗೆ ಕೃತಜ್ಞತೆ ಸಲ್ಲಿಸುವ ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ ಎಂದರು.

ಈ ಸಂದರ್ಭ ಗಾಯಕ ಪ್ರಶಾಂತ್ ಸಾಲ್ಯಾನ್ ಉಪಸ್ಥಿತರಿದ್ದರು.