ಜಿಲ್ಲೆ

ಕಂಟೇನರ್‌ನಲ್ಲಿ ಸಾಗಿಸುತ್ತಿದ್ದ 24 ಜಾನುವಾರು ರಕ್ಷಣೆ

ಇಂದಿರಾ ಎನ್ ಕೆ

ಉಳ್ಳಾಲ: ಕೇರಳದಿಂದ ಮಂಗಳೂರಿಗೆ ಕಂಟೇನರ್‌ನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಪೊಲೀಸ್ ಆಯುಕ್ತರಿಗೆ ನೇರವಾಗಿ ಬಂದ ಕರೆಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಮಂಗಳೂರಿನ ಸಿಸಿಬಿ ಪೊಲೀಸರು 24 ಜಾನುವಾರುಗಳನ್ನು ರಕ್ಷಿಸಿದ್ದು, ಚಾಲಕನನ್ನು ಬಂಧಿಸಿದ್ದಾರೆ.

ಕಂಟೇನರ್ ಚಾಲಕ ಉತ್ತರ ಪ್ರದೇಶ ರಾಜ್ಯದ ಮುಜಾಫರ್ ನಗರ ಜಿಲ್ಲೆಯ ಸಹಾನ್‌ಪೂರ್ ನಿವಾಸಿ ಆಸಿಫ್(25) ಬಂಧಿತನಾಗಿದ್ದು, ಆತನ ಜತೆಯಲ್ಲಿದ್ದ ಇನ್ನೋರ್ವ ಪರಾರಿಯಾಗಿದ್ದಾನೆ.

ಭಾನುವಾರ ಮುಂಜಾನೆ 1 ಗಂಟೆಗೆ ಮಂಗಳೂರು ಸಿಸಿಬಿ ಪಿಎಸ್‌ಐ ಶರಣಪ್ಪ ಭಂಡಾರಿ ನೇತೃತ್ವದ ತಂಡ ತಲಪಾಡಿ ಟೋಲ್‌ಗೇಟ್ ಬಳಿ ಜಾನುವಾರು ಸಾಗಾಟದ ಲಾರಿಗಾಗಿ ಕಾದು ಕುಳಿತಿದ್ದರು. ಈ ವೇಳೆ ಕೇರಳ ಭಾಗದಿಂದ ಬಂದ ಕಂಟೇನರ್ ತಡೆದು ತಪಾಸಣೆ ನಡೆಸಿದಾಗ 24 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿರುವುದು ಪತ್ತೆಯಾಗಿದೆ.

ಜಾನುವಾರುಗಳನ್ನು ರಕ್ಷಿಸಿದ ಪೊಲೀಸರು, ಚಾಲಕ ಆಸಿಫ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭ ಇನ್ನೋರ್ವ ಪರಾರಿಯಾಗಿದ್ದಾನೆ. ವಿಚಾರಣೆ ವೇಳೆ ಜಾನುವಾರುಗಳನ್ನು ಕೇರಳದಿಂದ ಕದ್ದು ಸಾಗಿಸುತ್ತಿರುವುದಾಗಿ ಬಂಧಿತ ಮಾಹಿತಿ ನೀಡಿದ್ದಾಗಿ ತಿಳಿದು ಬಂದಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.