ಜಮೀನು ಮಾಲೀಕ ಎಚ್.ಸಿ.ಶಿವರಾಮು ಎಚ್ಚರಿಕೆ
ಮಂಡ್ಯ: ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ಮಂಡ್ಯದಿಂದ-ಬೀರಗೋನಹಳ್ಳಿವರೆಗೆ ರಾಜ್ಯ ಹೆದ್ದಾರಿ ಕಾಮಗಾರಿಯಲ್ಲಿನ ಗೊಂದಲವನ್ನು ಕೂಡಲೇ ಬಗೆಹರಿಸದಿದ್ದರೆ ಜು.23ರಿಂದ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಜಾಗದ ಮಾಲೀಕರು ಆಗಿರುವ ಪ್ರೊ.ಎಂ.ಡಿ.ನಂಜುಂಡಸ್ವಾಮಿ ವಿಚಾರ ವೇದಿಕೆ ರಾಜ್ಯ ಸಂಚಾಲಕ ಎಚ್.ಸಿ.ಶಿವರಾಮು ಎಚ್ಚರಿಕೆ ನೀಡಿದರು.
ಗ್ರಾಮದಲ್ಲಿ ನನಗೆ ಸೇರಿದ ಜಾಗ ಸರ್ಕಾರಿ ರಸ್ತೆಯಾಗಿದೆ. ಅಂತೆಯೇ ಈಗಲೂ ನನ್ನ ಸ್ವತ್ತಿನಲ್ಲಿ ಪ್ರಸ್ತುತ ವಾಹನ ಸಂಚಾರ ನಡೆಯುತ್ತಿದೆ. ಸರ್ಕಾರಕ್ಕೆ ಸೇರಿದ ಜಾಗವಿದ್ದರೂ ಹಲವು ವರ್ಷದಿಂದ ರಸ್ತೆ ನಿರ್ಮಾಣ ಮಾಡುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಎಷ್ಟು ಬಾರಿ ಮನವಿ ಸಲ್ಲಿಸಿದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜು.6ರಿಂದ ತನ್ನ ಜಾಗಕ್ಕೆ ಬೇಲಿ ಹಾಕಿಕೊಳ್ಳುವುದಾಗಿ ನಾಮಫಲಕ ಅಳವಡಿಸಲಾಗಿತ್ತು. ಪರಿಣಾಮ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಕುಂಞ ಅಹಮದ್ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಅದರಂತೆ ಜಾಗಕ್ಕೆ ಸಂಬಂಧಿಸಿದ ದಾಖಲಾತಿ ತರುವಂತೆ ಸೂಚನೆ ನೀಡಿದ್ದರು. ಆದರೆ ಈವರೆಗೆ ಸಮಸ್ಯೆ ಬಗೆಹರಿಸದೇ ನಿರ್ಲಕ್ಷ್ಯ ಮಾಡಲಾಗುತ್ತಿದೆ. ನಮ್ಮ ತಾಳ್ಮೆಗೂ ಮೀತಿ ಇದೆ. ನನ್ನ ಜಾಗವನ್ನು ಭದ್ರ ಮಾಡಿಕೊಳ್ಳಲು ನ್ಯಾಯಾಲಯದಿಂದಲೇ ಅನುಮತಿ ಇದೆ. ಆದ್ದರಿಂದ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕ ನೇತೃತ್ವದಲ್ಲಿ ಸಭೆ ಆಯೋಜಿಸಬೇಕು ಎಂದರು.
ರೈತ ಜವರೇಗೌಡ ಇದ್ದರು.