ಚಿಕ್ಕಮಗಳೂರು: ತಾಲೂಕಿನ ಬಿಂಡಿಗಾ ಶ್ರೀ ದೇವೀರಮ್ಮನ ದೇವಾಲಯದಲ್ಲಿ ಅ.23ರಿಂದ 27ರವರೆಗೆ ನಡೆಯುವ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ಒಂದು ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 23ರ ರಾತ್ರಿ 9ರಿಂದ ಬೆಳಗ್ಗೆ 9ರವರೆಗೆ ದೇವಾಲಯಕ್ಕೆ 400 ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗುತ್ತದೆ. ಜಾತ್ರಾ ಪ್ರಯುಕ್ತ ಕೆಎಸ್ಆರ್ಟಿಸಿಯಿಂದ ದೇವಾಲಯಕ್ಕೆ ಭಕ್ತರು ತೆರಳಲು 125 ಬಸ್ ವ್ಯವಸ್ಥೆ ಮಾಡಬೇಕು. ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಟ್ರಾಫಿಕ್ ನಿಯಂತ್ರಣ, ಸೂಕ್ತ ರ್ಪಾಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
ದೇವಾಲಯ, ಬೆಟ್ಟದ ಸುತ್ತಮುತ್ತ ಮತ್ತು ಹತ್ತಿರದ ಪ್ರದೇಶಗಳಲ್ಲಿ ನಗರಸಭೆ ಹಾಗೂ ಮಲ್ಲೇನಹಳ್ಳಿ ಗ್ರಾಪಂನಿಂದ ಸ್ವಚ್ಛತಾ ಕಾರ್ಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸ್ವಚ್ಛತಾ ಕಾರ್ಯಗಳಿಗೆ ನಗರಸಭೆಯಿಂದ 10 ಸ್ವಚ್ಛತಾ ವಾಹನ ಒದಗಿಸುವಂತೆ ನಿರ್ದೇಶನ ನೀಡಿದರು. ಬೆಟ್ಟದ ಮೂರು ಭಾಗಗಳಲ್ಲಿ ಹಾಗೂ ಆಸ್ಪತ್ರೆಯಲ್ಲಿ ಆಂಬುಲೆನ್ಸ್, ತಜ್ಞ ವೈದ್ಯರು, ಸಿಬ್ಬಂದಿಯನ್ನು ನಿಯೋಜಿಸಬೇಕು. ದೇವಾಲಯಕ್ಕೆ ಹೋಗುವ ರಸ್ತೆಗಳನ್ನು ಶೀಘ್ರ ದುರಸ್ತಿಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.