ನಂಜನಗೂಡು: ಶ್ರೀಕ್ಷೇತ್ರ ಸುತ್ತೂರು ಮಠದ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮಿಗಳ 110ನೇ ಜಯಂತಿ ಮಹೋತ್ಸವವನ್ನು ನಗರದಲ್ಲಿ ಅ.23ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ತಿಳಿಸಿದರು.
ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ಸೇರಿದಂತೆ ತಾಲೂಕಿನ ವಿವಿಧ ಸಂಘ-ಸಂಸ್ಥೆಗಳು ಹಾಗೂ ಜನತೆಯ ಸಹಕಾರದೊಂದಿಗೆ ಶ್ರೀ ಗಳ ಜಯಂತಿಯನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 8.30ಕ್ಕೆ ಶ್ರೀನಂಜುಂಡೇಶ್ವರಸ್ವಾಮಿ ದೇವಾಲಯದಿಂದ ಶ್ರೀಗಳ ಪುತ್ಥಳಿಯನ್ನು ಬೆಳ್ಳಿರಥದಲ್ಲಿ ಕೂರಿಸಿ, ನಂದಿಧ್ವಜ, ವೀರಗಾಸೆ, ಪೂಜಾ ಕುಣಿತ, ನಾದಸ್ವರ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ರಾಷ್ಟ್ರಪತಿ ರಸ್ತೆಯಿಂದ ಜೆಎಸ್‌ಎಸ್ ಮಂಗಳ ಮಂಟಪದವರೆಗೂ ಮೆರವಣಿಗೆ ಮಾಡಲಾಗುತ್ತದೆ. 10.30ಕ್ಕೆ ಮಂಗಳ ಮಂಟಪದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಲ್ಲನಮೂಲೆ ಮಠದ ಶ್ರೀಚನ್ನಬಸವ ಸ್ವಾಮೀಜಿ, ದೇವನೂರು ಮಠದ ಶ್ರೀಮಹಾಂತ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸಭೆ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಸುನಿಲ್ ಬೋಸ್ ನೆರವೇರಿಸಲಿದ್ದು, ಶಾಸಕ ದರ್ಶನ್ ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಯು.ಎನ್.ಪದ್ಮನಾಭರಾವ್, ನರಸಿಂಹಸ್ವಾಮಿ, ಮಹಾದೇವಸ್ವಾಮಿ, ಪ್ರೊ.ಸುಬ್ಬಣ್ಣ, ಹೊನ್ನೇಗೌಡ, ಕೊತ್ತಲವಾಡಿ ಶಿವಕುಮಾರ್, ರವಿತೇಜ, ವಿದ್ಯಾಶಂಕರ್, ಪ್ರಭುಪ್ರಸಾದ್ ಮತ್ತಿತರರಿದ್ದರು.