ಪಾಂಡವಪುರ: ವಿಶ್ವ ರೈತ ದಿನಾಚರಣೆ ಹಾಗೂ ದಿ.ಕೆ.ಎಸ್. ಪುಟ್ಟಣ್ಣಯ್ಯ ಹುಟ್ಟುಹಬ್ಬದ ಪ್ರಯುಕ್ತ ಡಿ.23ರಂದು ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟದಿಂದ ಜಿಲ್ಲಾಮಟ್ಟದ ಪುರುಷ ಮತ್ತು ಮಹಿಳೆಯರ ರಸ್ತೆ ಓಟದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ತಿಳಿಸಿದರು.
ತಾಲೂಕಿನ ಕ್ಯಾತನಹಳ್ಳಿಯ ಪುಟ್ಟಣ್ಣಯ್ಯ ವೃತ್ತದಿಂದ ಬೆಳಗ್ಗೆ 7 ಗಂಟೆಗೆ ಸ್ಪರ್ಧೆ ಪ್ರಾರಂಭವಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ವಯಸ್ಸಿನ ನಿರ್ಬಂಧವಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿರುವುದಿಲ್ಲ. ಆದರೆ, ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು. ಎರಡು ವಿಭಾಗದ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪುರುಷರ ವಿಭಾಗದಲ್ಲಿ ಮೊದಲ ಬಹುಮಾನ 5 ಸಾವಿರ ನಗದು, ಎರಡನೇ ಬಹುಮಾನ 4 ಸಾವಿರ ರೂ., ಮೂರನೇ ಬಹುಮಾನ 3 ಸಾವಿರ ರೂ. ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನ 4 ಸಾವಿರ ರೂ., ದ್ವಿತೀಯ ಬಹುಮಾನ 3 ಸಾವಿರ ರೂ. ಮತ್ತು ತೃತೀಯ ಬಹುಮಾನ 2 ಸಾವಿರ ರೂ. ನಗದು ಮತ್ತು ಪಾರಿತೋಷಕ ನೀಡಿ ಗೌರವಿಸಲಾಗುವುದು ಎಂದರು.
ಇದೇ ವೇಳೆ ವಾಲಿಬಾಲ್ ಪಂದ್ಯಾವಳಿಯಲ್ಲಿ ಸಾಧನೆಗೈದು ಏಕಲವ್ಯ ಪ್ರಶಸ್ತಿಗೆ ಭಾಜನರಾಗಿರುವ ತಾಲೂಕಿನ ಬೇವಿನಕುಪ್ಪೆ ಗ್ರಾಮದ ಹರಿಪ್ರಸಾದ್ ಹಾಗೂ ಪ್ರೋ ಕಬಡ್ಡಿ 9ನೇ ಆವೃತಿಯಲ್ಲಿ ಪಿಂಕ್ ಪ್ಯಾಂಥರ್ಸ್ ಪರವಾಗಿ ಆಡುತ್ತಿರುವ ಕಬಡ್ಡಿ ಆಟಗಾರ ಕೆ.ಎಸ್.ಅಭಿಷೇಕ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಕೆ.ಟಿ. ಗೋವಿಂದೇಗೌಡ, ವಕೀಲ ಮೋಹನ್, ಡಾ.ಅಭಿನಯ್, ಕೆ.ಪಿ. ರವಿಕುಮಾರ್, ಮನೋಹರ್, ಎಸ್. ಸುರೇಶ್, ಶಿವರಾಜು, ಕುಮಾರಸ್ವಾಮಿ ಇತರರು ಇದ್ದರು.