ಜಿಲ್ಲೆ

23ರಂದು ಪುತ್ತರಿ ಹಬ್ಬದ ದಿನ ನಿಶ್ಚಯ

ನಾಪೋಕ್ಲು: ಕಕ್ಕಬ್ಬೆಯ ಪಾಡಿಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ನ.23ರಂದು ಬುಧವಾರ ಪುತ್ತರಿ ಹಬ್ಬದ ದಿನ ಮತ್ತು ಘಳಿಗೆಯನ್ನು ನಿಶ್ಚಯಿಸಲಾಗುವುದು.

ಪರಂಪರೆಯಂತೆ ಆ ದಿನ ಬೆಳಗ್ಗೆ 9.30 ಗಂಟೆಗೆ ದೇವಸ್ಥಾನದ ಪತ್ತೆಪರೆಯಲ್ಲಿ ದೇವತಕ್ಕರಾದ ಪರದಂಡ ಕುಟುಂಬಸ್ಥರು, ಪಾಡಿ ನಾಲ್ಕು ನಾಡಿನ ತಕ್ಕ ಮುಖ್ಯಸ್ಥರು, ದೇವಾಲಯದ ಕಣಿಯ ಜ್ಯೋತಿಷರಾದ ಅಮ್ಮಂಗೇರಿ ಕಣಿಯರು, ಭಕ್ತರು ಸೇರಿ ಪುತ್ತರಿ ಕಲ್ಲಡಚ ಹಬ್ಬಕ್ಕೆ ಕೃತಿಕಾ ನಕ್ಷತ್ರ ಕೂಡಿಬರುವ ದಿನವನ್ನು ಹಾಗೂ ಪುತ್ತರಿ ಆಚರಣೆಗೆ ರೋಹಿಣಿ ನಕ್ಷತ್ರ ಒದಗಿ ಬರುವ ದಿನವನ್ನು ಶಾಸ್ತ್ರೋಕ್ತವಾಗಿ ನಿರ್ಧರಿಸುವರು.


ನಂತರ ನಿತ್ಯ ಮಹಾಪೂಜೆ, ಪ್ರಸಾದ ವಿನಿಯೋಗ, ಅನ್ನಪ್ರಸಾದ ವಿನಿಯೋಗದ ನಂತರ ತಕ್ಕ ಮುಖ್ಯಸ್ಥರು ಭಕ್ತರೊಂದಿಗೆ ದೇವ ತಕ್ಕರಾದ ಪರದಂಡ ಕುಟುಂಬಸ್ಥರು ಆದಿಸ್ಥಾನ ಮಲ್ಮಕ್ಕೆ ಹಾಲು ಬಯ್ಯಡ ಸಹಿತ ತೆರಳಿ ಕಲ್ಲಡ್ಚ ಹಬ್ಬಕ್ಕೆ ದೇಶಕಟ್ಟು ವಿಧಿಸುವರು. ದೇಶ ಕಟ್ಟು ವಿಧಿಸಿದ ಬಳಿಕ ಉತ್ತರಿ ಹಬ್ಬದವರೆಗೆ ಜಿಲ್ಲೆಯ ಭಕ್ತರು ಯಾವುದೇ ಪ್ರಾಣಿಹಿಂಸೆ, ಮದುವೆ, ತಿಥಿ ಮುಂತಾದ ಸಮಾರಂಭಗಳನ್ನು ನಡೆಸದಂತೆ ದೇವಾಲಯದ ದೇವತಕರಾದ ಪರದಂಡ ಕುಟುಂಬಸ್ಥರು ತಿಳಿಸಿದ್ದಾರೆ.