ಜಿಲ್ಲೆ

23ರಂದು ಡಾ.ಎಚ್.ತಿಪ್ಪೇರುದ್ರಸ್ವಾಮಿ 95ನೇ ಸಂಸ್ಮರಣೆ

ಮೈಸೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನಗರ ಮತ್ತು ಜಿಲ್ಲಾ ಘಟಕ, ಕದಳಿ ಮಹಿಳಾ ವೇದಿಕೆ, ಸಂವಹನ ಪ್ರಕಾಶನದ ಸಹಯೋಗದಲ್ಲಿ ಸಾಹಿತಿ ಡಾ.ಎಚ್.ತಿಪ್ಪೇರುದ್ರಸ್ವಾಮಿ ಅವರ 95ನೇ ಸಂಸ್ಮರಣೆ, ದತ್ತಿ ಉಪನ್ಯಾಸ, ಸಂಸ್ಮರಣಾ ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಜು.23ರಂದು ಬೆಳಗ್ಗೆ 10.30ಕ್ಕೆ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.


ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ‘ಬಯಲ ಬೆಳಗು’, ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಹಿರೇಕಲ್ಮಠದ ಶ್ರೀ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರು ‘ನೆನಪಿನ ಬುತ್ತಿ’, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಶಿವಮೂರ್ತಿ ಅವರು ‘ಸಾಹಿತ್ಯಾವಲೋಕನ’ ಕೃತಿ ಬಿಡುಗಡೆ ಮಾಡುವರು.


ಧಾರವಾಡದ ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಡಾ.ವೀರಣ್ಣ ರಾಜೂರ, ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಡಾ.ಎಚ್.ತಿಪ್ಪೇರುದ್ರಸ್ವಾಮಿ ಸಂಸ್ಮರಣಾ ಸಮಿತಿ ಸಂಚಾಲಕಿ ಡಾ.ಎಚ್.ಟಿ.ಶೈಲಜಾ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಾ.ಎಚ್.ತಿಪ್ಪೇರುದ್ರಸ್ವಾಮಿ ಅವರು ನಾಡು ಕಂಡ ಅಪರೂಪದ ವಿದ್ವಾಂಸರು. ಸಾಹಿತ್ಯದ ಗರಿಮೆಗಾಗಿ, ಕನ್ನಡದ ಬಲಕ್ಕಾಗಿ ಜೀವನವಿಡೀ ಅಹರ್ನಿಶಿ ದುಡಿದ ಹೆಗ್ಗಳಿಕೆ ಅವರದು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಉನ್ನತ ಮಟ್ಟದ ಕೃತಿ ರಚಿಸಿದ್ದಾರೆ. ಅವರ ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ತೌಲನಿಕ ಕಾವ್ಯ ಮೀಮಾಂಸೆ, ಶರಣರ ಅನುಭಾವ ಸಾಹಿತ್ಯ, ಬಸವೇಶ್ವರ ವಚನ ದೀಪಿಕೆ, ಕರ್ತಾರನ ಕಮ್ಮಟ ಮೊದಲಾದ ಕೃತಿಗಳು ಚಿರಂತನವಾಗಿವೆ ಎಂದರು.


ಶರಣ ಸಾಹಿತ್ಯ ಪರಿಷತ್ ನಗರಾಧ್ಯಕ್ಷ ಮ.ಗು.ಸದಾನಂದಯ್ಯ, ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ಸಂವಹನ ಪ್ರಕಾಶನದ ಮಾಲೀಕ ಡಿ.ಎನ್.ಲೋಕಪ್ಪ ಇದ್ದರು.