ನಾಪೋಕ್ಲು: ಕೊಡಗಿನ ಮಳೆ ಬೆಳೆಗಳ ವರದಾತ, ಭಕ್ತರ ರಕ್ಷಕ, ಭವರೋಗ ನಿವಾರಕನೆಂದೇ ಖ್ಯಾತಿವೆತ್ತ ಪಾಡಿ ಶ್ರೀ ಇಗ್ಗುತಪ್ಪ ದೇವರ ಕುಂಬ್ಯಾರ್ ಕಲಾಡ್ಚ ವಾರ್ಷಿಕೋತ್ಸವ ಮಾ.23ರಂದು ನಡೆಯಲಿದೆ ಎಂದು ತಕ್ಕಮುಖ್ಯಸ್ಥ, ಭಕ್ತ ಜನ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ವಾರ್ಷಿಕೋತ್ಸವ ಅಂಗವಾಗಿ ಆದಿಸ್ಥಾನ ಮಲ್ಮದಲ್ಲಿ ಸಂಪ್ರದಾಯದಂತೆ ಪೂರ್ವಬಾದ್ರ ನಕ್ಷತ್ರದ ಸಮಯದಲ್ಲಿ ಕಟ್ಟುಬೀಳಲಾಯಿತು. ಮಾ.23ರಂದು ದೇವತಕ್ಕರಾದ ಪರದಂಡ ಕುಟುಂಬಸ್ಥರು ಹಾಗೂ ಬಟ್ಯತ್ ವಕ್ಕ ಪೇರಿಯಂಡ ಕುಟುಂಬಸ್ಥರ ಹಾಗೂ ಸಂಭಂದಪಟ್ಟ ಇತರ ಕುಟುಂಬಸ್ಥರ ಜೋಡೆತ್ತು ಪೋರಾಟ, ಪಾಲ್ ಬೈಯ್ಯಡ್‌ನೊಂದಿಗೆ ಶಾಸ್ತ್ರೋಕ್ತವಾಗಿ ಕಲಾಡ್ಚ ಹಬ್ಬ ಪ್ರಾರಂಭವಾಗುವುದು. ಅನ್ನ ಸಂತರ್ಪಣೆ ನೆರವೇರಲಿದೆ.
ನಂತರ ಚಂಡೆ ಮದ್ದಳೆಯೊಂದಿಗೆ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಆದಿಸ್ಥಾನ ಮಲ್ಮಗೆ ಕೊಂಡೊಯ್ಯುವರು. ಅಲ್ಲಿ ಸಾಂಪ್ರದಾಯಿಕ ದುಡಿಕೊಟ್ಟ್ ಪಾಟ್‌ನೊಂದಿಗೆ ಪಾಡಿ, ನೆಲಜಿ, ಪೇರೂರಿನ ತಕ್ಕ ಮುಖ್ಯಸ್ತರು ಕೂಡಿ ಎತ್ತ್ ಪೋರಾಟ ಸೇವೆ, ಪಾಲ್ ಬೈಯ್ಯಡ್ ನ ಪಾಯಸಮಾಡಿ ಪ್ರಸಾದವಾಗಿ ಅರ್ಪಿಸುವರು. ಮುಸ್ಸಂಜೆ ವೇಳೆಗೆ ವಿವಿಧ ಪೂಜಾ ಕೈಂಕರ್ಯದೊಂದಿಗೆ ಉತ್ಸವಮೂರ್ತಿಯನ್ನು ಪಾಡಿ ದೇವಾಲಯಕ್ಕೆ ತಂದು ದೇವಾಲಯದಲ್ಲಿ ಉತ್ಸವ ಮೂರ್ತಿಯನ್ನು ಹೊತ್ತು ನೃತ್ಯ ಮಾಡುವ ಮೂಲಕ ಉತ್ಸವಕ್ಕೆ ತೆರೆಬೀಳುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ದೇವರಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಭಕ್ತ ಜನ ಸಂಘದ ಪದಾಧಿಕಾರಿಗಳು ಹಾಗೂ ತಕ್ಕ ಮುಖ್ಯಸ್ಥರು ಪ್ರಕಟಣೆಯಲ್ಲಿ ಕೋರಿದ್ದಾರೆ.