ಜಿಲ್ಲೆ

23 ರಂದು ಚಿತ್ರದುರ್ಗದಲ್ಲಿ ಕರುನಾಡು ವೈಭವ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ದುರ್ಗದ ಸಿರಿ ಕಲಾ ಸಂಘ ಮಾ.23 ರಂದು ನಗರದ ಹಳೇ ಮಾಧ್ಯಮಿಕ ಶಾಲಾವರಣದಲ್ಲಿ ಕರುನಾಡು ವೈಭವ ಮತ್ತು ಧರ್ಮಭೂ ಮಿ ನೃತ್ಯರೂಪಕ ಹಾಗೂ ಸಂಗೀತ ಸಂಜೆ ಏರ್ಪಡಿಸಿದೆ ಎಂದು ಸಂಘದ ಅಧ್ಯಕ್ಷ ಎನ್.ಆರ್.ಮಹಂತರೆಡ್ಡಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುವರ್ಣ ಕರ್ನಾಟಕ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಕಾರ‌್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಪ್ರಭಾತ್ ಕಲಾವಿದರು ನೃತ್ಯ ರೂಪಕ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.

ಶ್ರಾವಣಸಂಜೆ ಹೆಸರಲ್ಲಿ ಜಿಲ್ಲೆಯ ಆರು ತಾಲೂಕುಗಳಿಗೆ ತಲಾ ಒಬ್ಬರಂತೆ ನಾನಾ ಪ್ರಕಾರಗಳ ಕಲಾವಿದರನ್ನು ಸನ್ಮಾನಿಸಲಾಗುವುದು. ಸ್ಮರಣಿಕೆಯೊಂದಿಗೆ ನಗದು ಪುರಸ್ಕಾರ ಪ್ರದಾನ ಮಾಡಲಾಗುವುದು. ಅರ್ಚನಾ ಉಡುಪ ಹಾಗೂ ಸ್ಥಳೀಯ ಕಲಾವಿದರಿಂದ ಗಾಯನ ಕಾರ‌್ಯಕ್ರಮವಿರುತ್ತದೆ ಎಂದರು.

ನಟಿ ಭಾರತಿ ವಿಷ್ಣುವರ್ಧನ್, ನಟ ದೊಡ್ಡಣ್ಣ, ಸಂಸದ ಯದುವೀರ್‌ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ, ಐಜಿಪಿ ರವಿಕಾಂತೇಗೌಡ ಮತ್ತಿತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅಂದಾಜು 25 ಸಾವಿರ ಜನರನ್ನು ನಿರೀಕ್ಷಿಸಲಾಗಿದೆ. ಪ್ರತಿವರ್ಷ ನಗರದಲ್ಲಿ ದುರ್ಗೋತ್ಸವ ಆಚರಿಸುವಂತೆ ಅಂದಿನ ಸಮಾರಂಭದಲ್ಲಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

60ಕ್ಕೂ ಹೆಚ್ಚು ಸದಸ್ಯರಿರುವ ಸಂಘ 2003ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಹಲವು ಅತ್ಯುತ್ತಮ ಕಾರ‌್ಯಕ್ರಮ ಏರ್ಪಡಿಸಿಕೊಂಡು ಬಂದಿದು,್ದ ನಾನಾ ಕಾರಣಗಳಿಂದಾಗಿ ಕಳೆದ 10ವರ್ಷಗಳಿಂದ ಯಾವುದೇ ಕಾರ‌್ಯಕ್ರಮ ಆಯೋಜಿಸಿರಲಿಲ್ಲ. 2004ರಲ್ಲಿ ಪಿ.ಬಿ.ಶ್ರೀನಿವಾಸ್ ಹಾಗೂ 2007ರಲ್ಲಿ ಎಲ್.ಆರ್.ಈಶ್ವರಿ ಅವರ ಕಾರ‌್ಯಕ್ರಮ ಆಯೋಜಿಸಲಾಗಿತ್ತು. ಸುನಾಮಿ ಕಾರಣದಿಂದಾಗಿ ಎಸ್.ಪಿ.ಬಾಲಸುಬ್ರಮಣ್ಯಂ ಕಾರ‌್ಯಕ್ರಮ ರದ್ದಾಗಿತ್ತು ಎಂದರು.

ಸಂಘದ ಗೌರವಾಧ್ಯಕ್ಷರಾದ ಬಿ.ಎ. ಲಿಂಗಾರೆಡ್ಡಿ, ಜಿ.ಎಸ್. ಮಂಜುನಾಥ್, ಕಾರ‌್ಯದರ್ಶಿಗಳಾದ ಕೆ.ಎಂ. ವೀರೇಶ್, ಅರುಣ್‌ಕುಮಾರ್, ಕಾರ‌್ಯಾಧ್ಯಕ್ಷರಾದ ಡಿ.ಎಸ್. ಸುರೇಶ್‌ಬಾಬು, ಸೈಯದ್ ಇಸಾಕ್, ಖಜಾಂಚಿ ಎಂ.ಕೆ. ಅನಂತರೆಡ್ಡಿ, ಅಬ್ದುಲ್ ರಹಿಮಾನ್, ಭವಾನಿ ಮಂಜುನಾಥ್, ನಟರಾಜ್, ಡಿ.ಒ.ಮುರಾರ್ಜಿ ಇದ್ದರು.

ದುರ್ಗೋತ್ಸವಕ್ಕೆ ಒತ್ತಾಯಿಸಿ ನಿಯೋಗ

ನಿರ್ದಿಷ್ಟ ಅನುದಾನವನ್ನು ಕಾಯ್ದಿರಿಸುವುದರೊಂದಿಗೆ ಪ್ರತಿವರ್ಷ ಚಿತ್ರದುರ್ಗದಲ್ಲಿ ದುರ್ಗೋತ್ಸವ ಆಚರಿಸುವಂತೆ ಒತ್ತಾಯಿಸಿ ಸಿ ಎಂ ಸಿದ್ದರಾಮಯ್ಯ ಅವರ ಬಳಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸಂಘದ ಸದಸ್ಯರನ್ನೊಳಗೊಂಡು ನಿಯೋಗ ಕ ರೆದೊಯ್ಯಲಾಗುವುದು ಎಂದು ಸಂಘದ ಗೌರವಾಧ್ಯಕ್ಷ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ ಹೇಳಿದರು. ಪ್ರತಿವರ್ಷ ರಾಜ್ಯದ ವಿವಿಧೆಡೆ ನಾನಾ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ದುರ್ಗೋತ್ಸವ ಆಚರಿಸಲು ಸರ್ಕಾರಿ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡುವುದಾಗಿ ಹೇಳಿದರು.