ಜಿಲ್ಲೆ

23, 24ರಂದು ವೀರಶೈವ ಲಿಂಗಾಯತ ಮಹಾಸಭಾದ ಮಹಾ ಅಧಿವೇಶನ

ಹಾಸನ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆಯ 24ನೇ ಮಹಾ ಅಧಿವೇಶನವನ್ನು ಇದೇ ತಿಂಗಳು ಡಿ. 23 ಮತ್ತು 24 ರಂದು ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ತಿಳಿಸಿದರು.
ಮಹಾಅಧಿವೇಶನಕ್ಕೆ ನಾಡಿನ ಹರ-ಗುರು-ಚರಮೂರ್ತಿಗಳು, ಸಚಿವರು, ಶಾಸಕರು, ಸಂಸದರು, ಸಮಾಜದ ಗಣ್ಯರು, ವಾಣಿಜ್ಯೋದ್ಯಮಿಗಳು, ಸಾಹಿತಿಗಳು, ವಿದ್ವಾಂಸರು, ಕಲಾವಿದರನ್ನು ಆಹ್ವಾನಿಸಲಾಗಿದೆ. ಈ ಸಮಾರಂಭಕ್ಕೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಮಹಾಸಭಾದ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವಸದಸ್ಯರು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎರಡು ದಿನಗಳ ಕಾಲ ನಡೆಯುವ ಈ ಸಮಾವೇಶದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕೈಗಾರಿಕಾ, ಕೃಷಿ, ಯುವ, ಮಹಿಳಾ ಅಧಿವೇಶನಗಳು ಮತ್ತು ಸಾಂಸ್ಕೃತಿಕ ಪರಂಪರೆ ಮುಂತಾದ ವಿಷಯಗಳ ಬಗ್ಗೆ ಗೋಷ್ಠಿಗಳಿರುತ್ತವೆ. ಅಧಿವೇಶನದ ಸವಿನೆನಪಿಗೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ಮಹಾಸಭೆಯ ಇತಿಹಾಸ, ಕಾರ್ಯ ಚಟುವಟಿಕೆಗಳನ್ನು ಪರಿಚಯಿಸುವ ವಸ್ತು ಪ್ರದರ್ಶನವಿರುತ್ತದೆ. ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಹಾಗೆಯೇ ಕೈಗಾರಿಕೆ ಮತ್ತು ವಾಣಿಜ್ಯ ಹಾಗೂ ಕೃಷಿ ಸಂಬಂಧಿತ ಪ್ರದರ್ಶನವಿರುತ್ತದೆ. ವಚನ ಗಾಯನ, ನೃತ್ಯರೂಪಕ, ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ. ಇಂತಹದೊಂದು ಅಭೂತಪೂರ್ವ ಸಮಾವೇಶಕ್ಕೆ ನಾಡಿನ ವೀರಶೈವ-ಲಿಂಗಾಯತ ಬಂಧುಗಳು ಕುಟುಂಬ ಸಮೇತ ಆಗಮಿಸಿ, ಸಮಾರಂಭವನ್ನು ಯಶಸ್ವಿಗೊಳಿಸಲು ಕೋರುತ್ತೇವೆ ಎಂದು ಮನವಿ ಮಾಡಿದರು.
ಈ ಐತಿಹಾಸಿಕ 24ನೇ ಮಹಾ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಭವಿಷ್ಯದಲ್ಲಿ ಸಮಾಜದ ಅಭಿವೃದ್ಧಿಗಾಗಿ, ಸಮಾಜದ ಒಳತಿಗಾಗಿ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಅವುಗಳಲ್ಲಿ ಕೆಲವುಗಳೆಂದರೆ, ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರ ಹಿಂದುಳಿದ ವರ್ಗಗಳ(ಒಬಿಸಿ) ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸುವುದು. ಸುಮಾರು ಎಂಟು ವರ್ಷಗಳಷ್ಟು ಹಳೆಯದಾದ, ಅನೇಕ ಲೋಪದೋಷಗಳಿಂದ ಕೂಡಿರುವ, ಬಿಡುಗಡೆಗೂ ಮುನ್ನಾವೇ ಬಹಿರಂಗಗೊಂಡಿರುವ ಕಾಂತರಾಜು ಆಯೋಗದ ವರದಿಯನ್ನು ತಿರಸ್ಕರಿಸುವುದು ಮತ್ತು ಯಾವುದೇ ಕಾರಣಕ್ಕೂ ವರದಿಯನ್ನು ಸ್ವೀಕರಿಸದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದು ಆಗಿದೆ. ಪ್ರಸ್ತುತ ತಂತ್ರಜ್ಞಾನಗಳನ್ನು ಬಳಸಿಕೊಂಡು, ಲೋಪ-ದೋಷಗಳನ್ನು ಸರಿಪಡಿಸಿಕೊಂಡು ರಾಜ್ಯ ಸರ್ಕಾರವು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸುವುದಾದರೆ ಸಂಪೂರ್ಣ ಸಹಕಾರ ನೀಡುವುದು ಸೇರಿದಂತೆ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಮಾಜಿ ಶಾಸಕ ಬಿ.ಆರ್. ಗುರುದೇವ್, ರಾಜ್ಯ ಘಟಕದ ಉಪಾಧ್ಯಕ್ಷೆ ಪಾರ್ವತಿ ಕರಂಡಿ, ರಾಜ್ಯ ಸಮಿತಿ ಸದಸ್ಯೆ ಗುರುನಾಥ್, ಜಿಲ್ಲಾ ಘಟಕದ ಸುಧಾ ವಿನೋದ್, ತಾಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ರವಿಕುಮಾರ್ ಇತರರು ಉಪಸ್ಥಿತರಿದ್ದರು.