ಜಿಲ್ಲೆ

22ರಂದು ವಿದ್ಯಾರ್ಥಿನಿಯರ ವಸತಿ ನಿಲಯ ಉದ್ಘಾಟನೆ

ಮೈಸೂರು: ಶ್ರೀ ಯೋಗಿ ನಾರೇಯಣ ಬಣಜಿಗ (ಬಲಿಜ) ಸಂಘ, ಶ್ರೀ ಯೋಗಿ ನಾರೇಯಣ ಬಣಜಿಗ (ಬಲಿಜ) ಯುವಕರ ಸಂಘದ ಸಹಯೋಗದಲ್ಲಿ ಡಾ.ಎಂ.ಎಸ್. ರಾಮಯ್ಯ ವಿದ್ಯಾರ್ಥಿನಿಯರ ವಸತಿ ನಿಲಯ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜ.22ರಂದು ಬೆಳಗ್ಗೆ 11ಕ್ಕೆ ಆಯೋಜಿಸಲಾಗಿದೆ.


ನಗರದ ಸರಸ್ವತಿಪುರಂನ ಬಣಜಿಗ ಹಾಸ್ಟೆಲ್ ಆವರಣದಲ್ಲಿ ಕಾರ್ಯಕ್ರಮಕ್ಕೆ ಮಾಜಿ ಸಚಿವ ಎಂ.ಆರ್. ಸೀತಾರಾಮ್ ಚಾಲನೆ ನೀಡುವರು. ವಸತಿ ನಿಲಯವನ್ನು ಶ್ರುತಿ ಸೀತಾರಾಮ್ ಉದ್ಘಾಟಿಸುವರು. ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮಹಾರಾಜ ಮುಕ್ತದಾನಂದಜೀ, ಸಂಘದ ಅಧ್ಯಕ್ಷ ಎಂ. ನಾರಾಯಣ ಪಾಲ್ಗೊಳ್ಳುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಗೋಪಾಲಕೃಷ್ಣ ತಿಳಿಸಿದರು.


ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಮುದಾಯದ ವಧು-ವರರ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.


ಬಲಿಜ ಸಮುದಾಯಕ್ಕೆ ಉದ್ಯೋಗ ಕ್ಷೇತ್ರಕ್ಕೂ 2ಎ ಮೀಸಲು ಸೌಲಭ್ಯ ತರಲು ಬಲಿಜರು ಹೋರಾಟ ನಡೆಸಿಕೊಂಡು ಬಂದಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು, ಸಮುದಾಯದ ಸಹನೆಯನ್ನು ಪರೀಕ್ಷೆ ಮಾಡುತ್ತಿದೆ ಎಂದು ಕಿಡಿಕಾರಿದರು.


ರಾಜ್ಯದಲ್ಲಿ ಸುಮಾರು 60 ಲಕ್ಷ ಬಲಿಜ ಸಮುದಾಯವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಹೀಗಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಮೀಸಲು ಸೌಲಭ್ಯ ದೊರೆತಿರುವಂತೆ ಉದ್ಯೋಗ ಮತ್ತು ರಾಜಕೀಯದಲ್ಲೂ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಜ.27ರಂದು ಬೆಂಗಳೂರಿನಲ್ಲಿ ಬಲಿಜ ಸಂಕಲ್ಪ ಯಾತ್ರೆ ನಡೆಯಲಿದ್ದು, ಮೈಸೂರು ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯಸ್ಥರು ಪಾಲ್ಗೊಳ್ಳಬೇಕು ಎಂದು ಕೋರಿದರು.
ಸಂಘದ ಪದಾಧಿಕಾರಿಗಳಾದ ಕೆ. ಚಂದ್ರಶೇಖರ್, ಬಿ.ಕೆ. ಸುರೇಶ್, ಎಚ್.ಪಿ. ಮೋಹನ್, ಲೆಕ್ಕ ಪರಿಶೋಧಕ ಡಿ. ನಾಗರಾಜ ಇದ್ದರು.