ಜಿಲ್ಲೆ

22ರಂದು ಕೆ.ಎಸ್.ವರದಾಚಾರ್ಯ ಶತಮಾನೋತ್ಸವ ಸಮಾರಂಭ

ಮೈಸೂರು: ಪಂಡಿತರತ್ನ ಕೆ.ಎಸ್.ವರದಾಚಾರ್ಯ ಶತಮಾನೋತ್ಸವ ಸಮಿತಿಯಿಂದ ಅ.22 ಮತ್ತು 23ರಂದು ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಕೆ.ಎಸ್.ವರದಾಚಾರ್ಯರ ಶಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ.
ಅ.22ರಂದು ಬೆಳಗ್ಗೆ 10ಕ್ಕೆ ಕೇಂದ್ರ ಮಾನವಸಂಪನ್ಮೂಲ ಸಚಿವ ಧರ್ಮೇಂದ್ರ ಪ್ರಧಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ‘ಸಮನ್ವಯ ವರದ’ ಸಂಸ್ಮರಣೆ ಗ್ರಂಥ ಬಿಡುಗಡೆ ಮಾಡಲಿದ್ದಾರೆ ಎಂದು ಶತಮಾನೋತ್ಸವದ ಸಂಸ್ಮರಣ ಗ್ರಂಥ ಸಂಪಾದಕ ಡಾ.ಎಚ್.ವಿ.ನಾಗರಾಜರಾವ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಪರಕಾಲ ಮಠದ ಶ್ರೀ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್ ಇತರರು ಭಾಗವಹಿಸುವರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಡಾ.ಕೆ.ಇ.ದೇವನಾಥನ್ ಅಧ್ಯಕ್ಷತೆ ವಹಿಸುವರು ಎಂದರು.
ನವದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ವಿಶ್ರಾಂತ ಕುಲಪತಿ ವಿದ್ವಾನ್ ಡಾ.ಪರಮೇಶ್ವರ ನಾರಾಯಣಶಾಸ್ತ್ರಿ, ತಿರುಪತಿ ಸಂಸ್ಕೃತ ವಿವಿ ನಿರ್ದೇಶಕ ವಿದ್ವಾನ್ ಡಾ.ಚಕ್ರವರ್ತಿ ರಂಗನಾಥನ್ ಅವರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ 3ಕ್ಕೆ ‘ಶ್ರೀ ವರದಾಚಾರ್ಯರ ದೃಷ್ಟಿಯಲ್ಲಿ ಮತತ್ರಯ ಸಮನ್ವಯ’ ವಿಚಾರ ಸಂಕಿರಣ ನಡೆಯಲಿದೆ ಎಂದು ವಿವರಿಸಿದರು.
ಅ.23ರಂದು ಬೆಳಗ್ಗೆ 9ಕ್ಕೆ ‘ಶ್ರೀ ವರದಾಚಾರ್ಯರ ದೃಷ್ಟಿಯಲ್ಲಿ ಜೀವನ ಸಮನ್ವಯ’ ವಿಚಾರ ಸಂಕಿರಣದಲ್ಲಿ ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಂ.ಎ.ಶ್ರೀನಿವಾಸನ್ ವಿಷಯ ಮಂಡಿಸುವರು. ಪ್ರಾಚ್ಯವಿದ್ಯಾ ಸಂಶೋಧನಾಲಯದ ವಿಶ್ರಾಂತ ಉಪ ನಿರ್ದೇಶಕ ಡಾ.ಟಿ.ವಿ.ಸತ್ಯನಾರಾಯಣ ಅಧ್ಯಕ್ಷತೆ ವಹಿಸುವರು. ಬೆಳಗ್ಗೆ 10.30ಕ್ಕೆ ‘ಶ್ರೀ ವರದಾಚಾರ್ಯರ ದೃಷ್ಟಿಯಲ್ಲಿ ದರ್ಶನ ಸಮನ್ವಯ’ ವಿಚಾರ ಸಂಕಿರಣ ನಡೆಯಲಿದೆ ಎಂದರು.
ಅಂದು ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಸಮಾರೋಪದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಗುಜರಾತ್‌ನ ನಾರಾಯಣ ಗುರುಕುಲದ ಶ್ರೀ ಮಾಧವಪ್ರಿಯ ದಾಸ್‌ಜೀ, ಮೇಲುಕೋಟೆಯ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸಾನ್ನಿಧ್ಯ ವಹಿಸಲಿದ್ದಾರೆ. ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಬಿ.ಸಿ.ನಾಗೇಶ್, ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷ ಅಶೋಕ ಹಾರನಹಳ್ಳಿ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಶಾರದಾ ವಿಲಾಸ ವಿದ್ಯಾಸಂಸ್ಥೆಯ ಡಾ.ಬಿ.ಎಂ.ಸುಬ್ರಾಯ ಇತರರು ಭಾಗವಹಿಸುವರು. ತಮಿಳುನಾಡಿನ ವೇದಮೂರ್ತಿ ಜಂಬುನಾಥನ್ ಫನಪಾಠಿ, ವಿದ್ವಾನ್ ಮಣಿ ದ್ರಾವಿಡಶಾಸ್ತ್ರಿ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಕೆ.ಎಸ್.ವರದಾಚಾರ್ಯರ ಶಿಷ್ಯರಲ್ಲಿ ಒಬ್ಬರಾದ ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಯತಿಗಳಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಆಚಾರ್ಯರ ಶಿಷ್ಯರಿಂದ ಅ.19ರಿಂದ 23ರವರೆಗೆ ಶತಮಾನೋತ್ಸವ ಸಮಿತಿ ಸಹಯೋಗದಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮತ-ಧರ್ಮಗಳ ಸಮನ್ವಯಕಾರರಾಗಿ, ಅನೇಕತೆಯಲ್ಲಿ ಏಕತೆಯನ್ನು ವರದಾಚಾರ್ಯರು ಪ್ರತಿಪಾದಿಸುತ್ತಿದ್ದರು. ಕುರಾನ್, ಬೈಬಲ್ ಹಾಗೂ ಹಿಂದು ಧರ್ಮಗ್ರಂಥಗಳಲ್ಲಿರುವ ಸಮಾನತೆ ತತ್ವಗಳನ್ನು ಪ್ರಚಾರ ಮಾಡುತ್ತಿದ್ದರು. ಹೀಗಾಗಿ ಅದನ್ನು ಮುಂದಿನ ತಲೆಮಾರಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಮೇಲುಕೋಟೆಯ ಇಳೈ ಆಳ್ವಾರ್ ಸ್ವಾಮೀಜಿ, ಡಾ.ಟಿ.ವಿ.ಸತ್ಯನಾರಾಯಣ, ಹೇರಂಬ ಆರ್.ಭಟ್ಟ ಇದ್ದರು.