ಮಂಗಳೂರು: ಜಿಲ್ಲೆಯಲ್ಲಿ ಕರೊನಾ ಮುಕ್ತರಾದವರ ಸಂಖ್ಯೆ ಸತತ ಮೂರನೇ ದಿನವೂ ಹೆಚ್ಚಾಗಿದೆ.
ಒಂದೇ ದಿನ 498 ಮಂದಿ ಗುಣ ಹೊಂದಿದ್ದಾರೆ. ಗೃಹ ನಿಗಾವಣೆಯಲ್ಲಿದ್ದು ಸೋಂಕು ಮುಕ್ತರಾದ 364 ಮಂದಿ ಕೋವಿಡ್‌ಕೇರ್ ಸೆಂಟರ್‌ಗಳಲ್ಲಿದ್ದ 89 ಮಂದಿ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣವಾಗಿ 45 ಮಂದಿ ಇದರಲ್ಲಿ ಸೇರಿದ್ದಾರೆ.
ಬುಧವಾರ 113 ಮಂದಿ ಐಎಲ್‌ಐ ಹೊಂದಿದವರು, 11 ಮಂದಿ ತೀವ್ರ ಉಸಿರಾಟ ತೊಂದರೆಯವರು ಸೇರಿದಂತೆ 229 ಮಂದಿಗೆ ಸೋಂಕು ದೃಢಪಟ್ಟಿದೆ. 69 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ. ಇದರಲ್ಲಿ 117 ಮಂದಿ ರೋಗ ಲಕ್ಷಣ ಇದ್ದವರಾಗಿದ್ದು 112 ಮಂದಿ ಯಾವ ಲಕ್ಷಣಗಳನ್ನೂ ಹೊಂದಿಲ್ಲ. ಮಂಗಳೂರಿನ 133, ಬಂಟ್ವಾಳದ 45, ಪುತ್ತೂರಿನ 22, ಸುಳ್ಯದ 5, ಬೆಳ್ತಂಗಡಿಯ 14, ಇತರ ಜಿಲ್ಲೆಯ 10 ಮಂದಿ ಸೇರಿದ್ದಾರೆ.
ಸೋಂಕಿತರ ಪೈಕಿ 7 ಮಂದಿ ಮೃತಪಟ್ಟಿರುವ ವರದಿ ಬುಧವಾರ ಬಂದಿದ್ದು, ಇದರಲ್ಲಿ ಮಂಗಳೂರಿನ ಇಬ್ಬರು, ಮೂಡುಬಿದಿರೆ, ಬಂಟ್ವಾಳದ ಒಬ್ಬೊಬ್ಬರು ಹಾಗೂ ಇತರ ಜಿಲ್ಲೆಯ ಮೂವರು ಸೇರಿದ್ದಾರೆ. ಒಟ್ಟು ಮೃತರ ಸಂಖ್ಯೆ 244ಕ್ಕೇರಿದೆ. ಪಾಸಿಟಿವ್ ಪ್ರಕರಣ 7825ಕ್ಕೇರಿದ್ದು, ಸಕ್ರಿಯ ಪ್ರಕರಣ 2349. ಡಿಸ್‌ಚಾರ್ಜ್ ಆದವರ ಸಂಖ್ಯೆ 5232ಕ್ಕೇರಿದೆ.
ಕಾಸರಗೋಡಲ್ಲಿ 68 ಪಾಸಿಟಿವ್
ಕಾಸರಗೋಡು: ಜಿಲ್ಲೆಯ 68 ಮಂದಿ ಒಳಗೊಂಡಂತೆ ರಾಜ್ಯದಲ್ಲಿ ಒಟ್ಟು 1,212 ಜನರಲ್ಲಿ ಬುಧವಾರ ಕೋವಿಡ್-19 ಕಾಣಿಸಿಕೊಂಡಿದೆ. ರಾಜ್ಯದಲ್ಲಿ ರೋಗ ಬಾಧಿಸಿದ್ದ 880 ಮಂದಿ ಗುಣಮುಖರಾಗಿದ್ದಾರೆ.