ಜಿಲ್ಲೆ

22 ರಂದು ಕಾಂಗ್ರೆಸ್ ಪಕ್ಷದ ಪೂರ್ವಭಾವಿ ಸಭೆ:ಅಧ್ಯಕ್ಷ ಇ.ಎಚ್ ಲಕ್ಷ್ಮಣ್ ಮಾಹಿತಿ

ಹಾಸನ: ಮುಂಬರುವ ಲೋಕಸಭಾ ಚುನಾವಣೆಯನ್ನು ಸಂಘಟಿಸುವ ಉದ್ದೇಶದಿಂದ ಅ.22ರ ಭಾನುವಾರದಂದು ಪಕ್ಷದ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇ.ಎಚ್ ಲಕ್ಷ್ಮಣ್ ತಿಳಿಸಿದರು.

ಭಾನುವಾರ ಬೆಳಗ್ಗೆ 11 ಗಂಟೆಗೆ ನಗರದ ನಂದಗೋಕುಲ ಕನ್ವೆಷನ್ ಹಾಲ್‌ನಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ಸಭೆಗೆ ಸಚಿವರಾದ ಕೆ.ಎನ್. ರಾಜಣ್ಣ, ಚೆಲುವರಾಯಸ್ವಾಮಿ, ಸಂಸದ ಡಿ.ಕೆ ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್. ಚಂದ್ರಪ್ಪ ವಿಧಾನ ಪರಿಷತ್ ಸದಸ್ಯ ಜಿ. ಮಧು ಆಗಮಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಹಾಲಿ ಹಾಗೂ ಮಾಜಿ ಶಾಸಕರು, ತಾಪಂ, ಜಿಪಂ ಹಾಲಿ ಮತ್ತು ಮಾಜಿ ಸದಸ್ಯರು, ನಗರ ಸಭೆ, ಪಪಂ, ಗ್ರಾಪಂ ಸದಸ್ಯರು, ಅಧ್ಯಕ್ಷರು ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಮಟ್ಟದಲ್ಲಿ ಇತರೆ ಪಕ್ಷದ ಮುಖಂಡರು ಕಾಂಗ್ರೆಸ್ ಸೇರ್ಪಡೆ ಕುರಿತು ಯಾವುದೇ ಚರ್ಚೆ ಆಗಿಲ್ಲ. ನನ್ನ ಗಮನಕ್ಕೂ ಬಂದಿಲ್ಲ. ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಸೇರ್ಪೆಡೆ ಮಾಡಿಕೊಳ್ಳುವಂತೆ ವರಿಷ್ಠರು ಹೇಳಿದ್ದಾರೆ. ಅದರಂತೆ ಕಾರ್ಯಕರ್ತರನ್ನು ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ಪ್ರಮುಖ ನಾಯಕರ ಪಕ್ಷ ಸೇರ್ಪಡೆ ವಿಚಾರ ವರಿಷ್ಠರ ಮಟ್ಟದಲ್ಲಿ ಚರ್ಚೆಯಾಗುತ್ತದೆ ಎಂದು ಹೇಳಿದರು.

ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ ಮೂವರು ಸಚಿವರು ಬಂದು ಹೋಗಿದ್ದಾರೆ. ಇತರೆ ಕ್ಷೇತ್ರಗಳಿಗೆ ಯಾರೂ ಸಹ ಬಂದಿಲ್ಲ. ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಇತರೆ ಕ್ಷೇತ್ರಗಳನ್ನು ನಿರ್ಲಕ್ಷ್ಯ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ಜಿಲ್ಲಾಧ್ಯಕ್ಷನಾಗಿ ನಾನು ಹಾಗೂ ಪಕ್ಷದ ಮುಖಂಡರು ಜಿಲ್ಲೆಯ ಜನರ ಜತೆ ದಿನನಿತ್ಯ ಒಡನಾಟ ಇಟ್ಟುಕೊಂಡಿದ್ದೇವೆ. ಜಿಲ್ಲಾ ಕಚೇರಿಗೆ ವಾರಕ್ಕೆ ಮೂರರಿಂದ ನಾಲ್ಕು ಬಾರಿ ಬಂದು ಕಾರ್ಯಕರ್ತರವನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸುತ್ತಿದ್ದೇವೆ. ಸಾರ್ವಜನಿಕರ ಸಂಕಷ್ಟಗಳಿಗೆ ನಿರಂತರವಾಗಿ ಸ್ಪಂದಿಸಲಾಗುತ್ತಿದೆ. ಕೆಲವೊಂದು ವಿಚಾರಗಳನ್ನು ಆಲಿಸಿ ಮೇಲ್ಮಟ್ಟಕ್ಕೆ ತಿಳಿಸಿ, ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿದ್ದೇವೆ. ಯಾವ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.