ಜಿಲ್ಲೆ

21ರಿಂದ ಶ್ರೀಗುರು ಕರಿಸಿದ್ದೇಶ್ವರಸ್ವಾಮಿ ಮಠದಲ್ಲಿ ಕೃತಿಕೋತ್ಸವ, ಕರ್ಪೂರ ಸೇವೆ

ಅರಸೀಕೆರೆ ಗ್ರಾಮಾಂತರ: ಕಣಕಟ್ಟೆ ಹೋಬಳಿಯ ಶ್ರೀಕ್ಷೇತ್ರ ಹೊನ್ನವಳ್ಳಿ ಗ್ರಾಮದ ಶ್ರೀಗುರು ಕರಿಸಿದ್ದೇಶ್ವರಸ್ವಾಮಿ ಮಠದಲ್ಲಿ ಅ.21ರಿಂದ 23ರವರೆಗೆ ಶ್ರೀಕರಿಸಿದ್ದೇಶ್ವರಸ್ವಾಮಿ ಅವರ ಕೃತಿಕೋತ್ಸವ, ಕರ್ಪೂರ ಸೇವೆ, ಧಾರ್ಮಿಕ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಲಿದೆ ಎಂದು ಶ್ರೀಮಠದ ಪೀಠಾಧ್ಯಕ್ಷ ಶ್ರೀಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃತಿಕೋತ್ಸವ, ಕರ್ಪೂರ ಸೇವೆ, ಧಾರ್ಮಿಕ ಪೂಜಾ ಕಾರ್ಯಕ್ರಮ ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ಮಠದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಅದ್ದೂರಿಯಾಗಿ ನಡೆದುಕೊಂಡು ಬರುತ್ತಿದೆ. ಈ ಬಾರಿಯೂ ಅ.21ರಂದು ಅಮಾವಾಸ್ಯೆ ಪೂಜೆಯೊಂದಿಗೆ ಪ್ರಾರಂಭವಾಗಿ ಶ್ರೀಗುರು ಕರಿಸಿದ್ದೇಶ್ವರಸ್ವಾಮಿ ಅವರಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಅಲಂಕಾರ ಮತ್ತು ಮಹಾ ಮಂಗಳಾರತಿಯನ್ನು ನೆರವೇರಿಸಲಾಗುವುದು.

ಅ.22ರಂದು ಬೆಳಗ್ಗೆ 9ಕ್ಕೆ ಶ್ರೀಗಳವರ ಸಮ್ಮುಖದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರುವುದು. ಅ.23ರಂದು ಮುಂಜಾನೆ 4.30ರಿಂದ ಶ್ರೀಸ್ವಾಮಿಯವರಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ನೆರವೇರಲಿದೆ. ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಬೆಳಗ್ಗೆ 11.30ರಿಂದ ಶ್ರೀಗುರು ಕರಿಸಿದ್ದೇಶ್ವರ ಸ್ವಾಮಿಗೆ ವಿಶೇಷ ಅಲಂಕಾರದೊಂದಿಗೆ ಕರ್ಪೂರ ಸೇವೆ, ಉಯ್ಯಲೆ ಸೇವೆ, ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನೆರವೇರುತ್ತದೆ ಎಂದು ತಿಳಿಸಿದರು.