ಕುಶಾಲನಗರ: ಕಾವೇರಿ ನದಿ ತೀರ್ಥಯಾತ್ರಾ ಅಭಿಯಾನಕ್ಕೆ ಅ.21ರಂದು ತಲಕಾವೇರಿಯಲ್ಲಿ ಚಾಲನೆ ನೀಡಲಾಗುವುದು. ನವೆಂಬರ್ 13ರಂದು ತಮಿಳುನಾಡಿನ ಪೂಂಪ್‌ಹಾರ್ ಬಳಿ ಕಾವೇರಿ ಮತ್ತು ಬಂಗಾಳಕೊಲ್ಲಿ ಸಮುದ್ರ ಸಂಗಮದಲ್ಲಿ ಸಮಾರೋಪಗೊಳ್ಳಲಿದೆ.
ಕಾವೇರಿ ನದಿ ಸ್ವಚ್ಛತಾ ಆಂದೋಲನ, ಅಖಿಲ ಭಾರತ ಸನ್ಯಾಸಿಗಳ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಯಾತ್ರೆಗೆ ತಲಕಾವೇರಿಯಲ್ಲಿ ಜರುಗಲಿರುವ ಕಾವೇರಿ ನದಿ ಉತ್ಸವ ಸಮಾರಂಭದಲ್ಲಿ ಚಾಲನೆ ಸಿಗಲಿದೆ. ನಂತರ ನದಿ ತಟದ ಪ್ರದೇಶಗಳಲ್ಲಿ ಸಾಗಿ ಜನರಿಗೆ ನದಿ ಮಹತ್ವ ಮತ್ತು ನೀರಿನ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಅ.22ರಂದು ರಾಮನಾಥಪುರ, ಕೃಷ್ಣರಾಜಸಾಗರ, ಶ್ರೀರಂಗಪಟ್ಟಣ, ರಾಮನಗರ, ಕನಕಪುರ ಮಾರ್ಗವಾಗಿ ತಮಿಳುನಾಡಿನ ಕಡೆಗೆ ಯಾತ್ರೆ ಸಾಗಲಿದೆ. ಮೂಲ ಕಾವೇರಿಯಿಂದ ಪವಿತ್ರ ಕಾವೇರಿ ತೀರ್ಥವನ್ನು ಸಂಗ್ರಹಿಸಿ ಪೂಜೆ ಸಲ್ಲಿಸಿ ಯಾತ್ರೆಯಲ್ಲಿ ಕೊಂಡೊಯ್ದು ನ.13 ರಂದು ಪೂಂಪ್‌ಹಾರ್ ಸಮುದ್ರ ಸಂಗಮದಲ್ಲಿ ವಿಶೇಷ ಪೂಜಾ ಕಾರ್ಯಕ್ರಮದೊಂದಿಗೆ ವಿಸರ್ಜನೆ ಮಾಡಲಾಗುವುದು ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಕೇರಳ ರಾಜ್ಯಗಳ ಸುಮಾರು 150 ಕ್ಕೂ ಅಧಿಕ ಸಾಧು-ಸಂತರು ಕಾವೇರಿ ರಥದೊಂದಿಗೆ ಅ.20ರಂದು ಜಿಲ್ಲೆಗೆ ಆಗಮಿಸಲಿದ್ದು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.