ಜಿಲ್ಲೆ

21ರಂದು ವಿಶ್ವ ಯೋಗ ದಿನ

ಕೆ.ಎಂ.ದೊಡ್ಡಿ: ಇಲ್ಲಿನ ಜನನಿ ಎಜುಕೇಷನ್ ಸೊಸೈಟಿ ಆವರಣದಲ್ಲಿ 9ನೇ ವಿಶ್ವ ಯೋಗ ದಿನವನ್ನು ಜೂ.21ರಂದು ಆಚರಿಸಲಾಗುತ್ತಿದೆ ಎಂದು ಯೋಗ ಗುರು ಡಾ.ಎಂ.ಮಲ್ಲಿಕಾರ್ಜುನಸ್ವಾಮಿ ತಿಳಿಸಿದರು.


ಜನನಿ ವಿದ್ಯಾಸಂಸ್ಥೆ, ಕನ್ನಡ ಸಂಘ, ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ, ಪ್ರಜಾಪ್ರಿಯ ಆಸರೆ ಟ್ರಸ್ಟ್, ಸಮಾನ ಮನಸ್ಕರ ವೇದಿಕೆ, ಯೋಗ ಗುರುಗಳಾದ ಪ್ರಕಾಶ್ ಯೋಗಿ ಮತ್ತು ಪ್ರಸಾದ್ ಯೋಗಿ ಸಹಕಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸುಮಾರು 600ಕ್ಕೂ ಹೆಚ್ಚು ಯೋಗಪಟುಗಳ ಸಮ್ಮುಖದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.


ಜನನಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ಕೆ ಜಗದೀಶ್ ಮಾತನಾಡಿ, ಕಾರ್ಯಕ್ರಮವನ್ನು ಶಾಸಕ ಕದಲೂರು ಉದಯ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಭಾರತೀ ಕಾಲೇಜು ಕಾರ್ಯದರ್ಶಿ ಬಿ.ಎಂ ನಂಜೇಗೌಡ ವಹಿಸಲಿದ್ದಾರೆ. ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕಿ ರಾಗಿಣಿ, ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್ ಭಾಗವಹಿಸುವರು. ಯೋಗ ದಿನಕ್ಕೆ ಬರುವವರು ಬಿಳಿ ಸಮವಸ್ತ್ರ ಧರಿಸಿ ಬೆಳಗ್ಗೆ 6.30 ಗಂಟೆಗೆ ಯೋಗ ಮ್ಯಾಟ್‌ನೊಂದಿಗೆ ಆಗಮಿಸಬೇಕು ಎಂದು ತಿಳಿಸಿದರು.


ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಎಸ್ ಬೋರೇಗೌಡ ಮಾತನಾಡಿ, ಯೋಗ ದಿನಾಚರಣೆ ಕಾರ್ಯಕ್ರಮ ನಿಜಕ್ಕೂ ಸಂತಸದ ವಿಷಯ. ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.