ಹಾಸನ: ‘ಮಧುರ ಕಾವ್ಯ’ ಚಲನಚಿತ್ರವು ಮುಂದಿನ ಶುಕ್ರವಾರ ಜು.21ರಂದು ರಾಜ್ಯಾದ್ಯಂತ ತೆರೆಕಾಣಲಿದ್ದು, ಸಿನಿ ಪ್ರಿಯರು ವೀಕ್ಷಿಸಿ ಹರಸಬೇಕೆಂದು ಚಿತ್ರದ ನಿರ್ದೇಶಕ ಮಧುಸೂದನ್ ಮನವಿ ಮಾಡಿದರು.
ಆಯುರ್ವೇದ ಮತ್ತು ಅಲೋಪಥಿ ವೈದ್ಯ ಪದ್ಧತಿಯ ನಡುವೆ ನಡೆಯುವ ಘರ್ಷಣೆಯ ಕಥಾ ವಸ್ತುವನ್ನು ಇಟ್ಟುಕೊಂಡು ಚಿತ್ರ ನಿರ್ಮಿಸಲಾಗಿದೆ. ಸ್ವತಃ ತಾವೇ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ನಾಯಕಿಯ ಪಾತ್ರವಿಲ್ಲ. ನಾಯಕನ ತಾಯಿಯ ಪಾತ್ರದಲ್ಲಿ ಯಶೋಧಾ ಅವರು ಕಾಣಿಸಿಕೊಂಡಿದ್ದು, ಖಳನಾಯಕನಾಗಿ ರಾಜುಕುಮಾರ್ ನಾಯಕ್ ನಟಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಯುರ್ವೇದ ಸಂಪ್ರದಾಯ ಉಳಿಯಬೇಕು ಎನ್ನುವುದೇ ನಮ್ಮ ಮೂಲ ಉದ್ದೇಶ. ನಿಸ್ವಾರ್ಥ ಸೇವೆ ಸಲ್ಲಿಸುವ ನಾಟಿ ವೈದ್ಯನಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಲಾಭಿ ನಡೆಸುವವರ ವಿರುದ್ಧ ಹೋರಾಟ ನಡೆಸಿ, ನಾಟಿ ವೈದ್ಯ ಪದ್ಧತಿಯನ್ನು ರಕ್ಷಿಸುವಂತಹ ಪಾತ್ರವದು. ನಮ್ಮ ಚಿತ್ರದ ಮೂಲಕ ಸಮಾಜಕ್ಕೆ ಒಂದು ಸಂದೇಶ ಹೇಳಿದ್ದೇವೆ. ಹಾಗಂತ ಇದೇನು ಪಿರಿಯಾಡಿಕ್ ಸ್ಟೋರಿಯಲ್ಲ. ಈಗಿನ ಕಾಲದಲ್ಲೇ ನಡೆಯುವ ಕಥೆ. ತಲತಲಾಂತರದಿಂದ ನಡೆದು ಬಂದಿರುವ ಪಾರಂಪರಿಕ ಆಯುರ್ವೇದ ವೈದ್ಯಕೀಯ ಪದ್ಧತಿಯನ್ನು ರಕ್ಷಿಸಬೇಕು ಎಂಬುದನ್ನು ಈ ಚಿತ್ರದ ಮೂಲಕ ಹೇಳಿದ್ದೇವೆ ಎಂದರು.
ಉದಯಭಾಸ್ಕರ್ ಅವರ ಛಾಯಾಗ್ರಹಣದಲ್ಲಿ ಚಿತ್ರ ಮೂಡಿಬಂದಿದ್ದು, ಅಣ್ಣಪ್ಪಸ್ವಾಮಿ, ನಾಚಪ್ಪ, ಜಗನ್ನಾಥ ಶೆಟ್ಟಿ, ಶ್ರೀನಿವಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಣ್ಣಪ್ಪಸ್ವಾಮಿ, ರಾಜು ಕುಮಾರ್ ನಾವಿಕ್, ಸತೀಶ್ ಮೌರ್ಯ ಉಪಸ್ಥಿತರಿದ್ದರು.