ಜಿಲ್ಲೆ

21ರಂದು ‘ಅನಂತಾಶ್ವಥ’ ಭಾವಗೀತೆಗಳ ಕಾರ್ಯಕ್ರಮ

ಮೈಸೂರು: ಸಂಚಲನ ಮೈಸೂರು ಸಂಸ್ಥೆ ವತಿಯಿಂದ ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿ ಹಾಗೂ ಸಿ.ಅಶ್ವಥ್ ಅವರ ಸ್ಮರಣಾರ್ಥ ‘ಅನಂತಾಶ್ವಥ’ ಭಾವಗೀತೆಗಳ ಕಾರ್ಯಕ್ರಮವನ್ನು ಆ.21ರಂದು ಸಂಜೆ 6ಕ್ಕೆ ಕಿರುರಂಗಮಂದಿರದಲ್ಲಿ ಆಯೋಜಿಸಲಾಗಿದೆ.


5 ದಿನಗಳ ಕಾಲ ಸುಗಮ ಸಂಗೀತ ತರಬೇತಿ ಶಿಬಿರದಲ್ಲಿ ಈ ಮೂವರು ದಿಗ್ಗಜರ ಸ್ವರ ಸಂಯೋಜನೆಯ ಅಪರೂಪದ ಗೀತೆಗಳ ಗಾಯನ ಕಲಿಕಾರ್ಥಿಗಳಿಗೆ ಹೇಳಿಕೊಡಲಾಗಿತ್ತು. ಈ ಶಿಬಿರಾರ್ಥಿಗಳು ಗಾಯನ ಪ್ರಸ್ತುತಿಯನ್ನೂ ಅಂದಿನ ಕಾರ್ಯಕ್ರಮದಲ್ಲಿ ಮಾಡಲಿದ್ದಾರೆ ಎಂದು ಸಂಯೋಜಕ, ಹಿನ್ನೆಲೆ ಗಾಯಕ ರವಿ ಮೂರೂರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಈ ದಿಗ್ಗಜರ ಸ್ವರ ಸಂಯೋಜನೆಯ ಭಾವಗೀತೆಗಳನ್ನು ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಗಾಯನದ ಕ್ರಿಯಾಶೀಲತೆಯೊಂದಿಗೆ ಪ್ರಸ್ತುತಪಡಿಸಲಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಕವಿ ಡಾ.ಜಯಪ್ಪ ಹೊನ್ನಾಳಿ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.