ಜಿಲ್ಲೆ

21ರ ಯೋಗ ದಿನಾಚರಣೆ ಸಿದ್ಧತೆಗೆ ಸೂಚನೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜೂ.21ರಂದು ನಗರದಲ್ಲಿ ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ೋಷವಾಕ್ಯದಡಿ ಯೋಗ ಪ್ರದರ್ಶನವನ್ನು ಅಚ್ಚುಕಟ್ಟಾಗಿ ಆಯೋಜಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಆಯುಷ್ ಇಲಾಖೆ ವತಿಯಿಂದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಸದಸ್ಯರೊಂದಿಗೆ ಶುಕ್ರವಾರ ಆಯೋಜಿಸಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಜೂ.21ರ ಮುಂಜಾನೆ 6 ಗಂಟೆಗೆ ನಗರದ ಪೊಲೀಸ್ ಕವಾಯತು ಮೈದಾನಲ್ಲಿ ಯೋಗ ದಿನ ಆಚರಣೆ ಕಾರ್ಯಕ್ರಮ ಆಯೋಜಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರ ಬಳಿ ಅನುಮತಿ ಪಡೆದುಕೊಳ್ಳಿ. ಇದು ನಗರದ ಹೃದಯಭಾಗದ ಪ್ರದೇಶವಾಗಿರುವುದರಿಂದ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಪರೀಕ್ಷೆ ನಡೆಯುತ್ತಿರುವ ಪದವಿ ವಿದ್ಯಾರ್ಥಿಗಳನ್ನು ಬಿಟ್ಟು ಉಳಿದ ವಿದ್ಯಾರ್ಥಿಗಳನ್ನು ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ತಿಳಿಸಿ. ಪದವಿ ಪೂರ್ವ ಕಾಲೇಜುಗಳಿಂದಲೂ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಸೂಚನೆ ನೀಡಿ. ಯೋಗ ಸಂಸ್ಥೆಗಳ ಸದಸ್ಯರು ಯೋಗಾಸಕ್ತರನ್ನು ಕಾರ್ಯಕ್ರಮಕ್ಕೆ ಕರೆತನ್ನಿ. ನಿಮ್ಮ ಸಂಸ್ಥೆಯ ಟೀ ಶರ್ಟ್‌ಗಳನ್ನು ಧರಿಸಿದ್ದರೆ ಶಿಸ್ತುಬದ್ಧವಾಗಿರುತ್ತದೆ ಎಂದು ಹೇಳಿದರು.

ನಗರಸಭೆಯಿಂದ ಕವಾಯತು ಮೈದಾನವನ್ನು ಸ್ವಚ್ಛಗೊಳಿಸಬೇಕು. ಯೋಗ ದಿನಾಚರಣೆಯಂದು ಒಂದು ವೇಳೆ ಯಾರಿಗಾದರೂ ತುರ್ತು ಚಿಕಿತ್ಸೆಯ ಅಗತ್ಯ ಇದ್ದರೆ ವೈದ್ಯರು, ಶುಶ್ರೂಷಕರು, ಆಂಬುಲೆನ್ಸ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಟ್ಟಿರಬೇಕು. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ್ ಅವರಿಗೆ ಕ್ರಮ ವಹಿಸಲು ನಿರ್ದೇಶನ ನೀಡಿದರು.

ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಯೋಗ ದಿನಾಚರಣೆಯ ಮುಂಚಿತವಾಗಿ ಹಾಸ್ಟೆಲ್‌ಗಳಲ್ಲೇ ಯೋಗಾಭ್ಯಾಸ ಮಾಡಿಸಿ. ಬಳಿಕ ಜೂ.21ರಂದು ಕಾರ್ಯಕ್ರಮಕ್ಕೆ ಕರೆತನ್ನಿ. ಪೊಲೀಸರು ಬಂದೋಬಸ್ತ್‌ಗೆ ಮಾತ್ರವಲ್ಲದೆ, ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಬೇಕು. ಪಾಲ್ಗೊಳ್ಳುವ ಎಲ್ಲರಿಗೂ ಆಯುಷ್ ಇಲಾಖೆಯಿಂದ ಉಪಾಹಾರದ ವ್ಯವಸ್ಥೆ ಮಾಡಿ. ಅಧಿಕಾರಿಗಳು ಮತ್ತು ಯೋಗ ಸಂಸ್ಥೆಗಳು ಜವಾಬ್ದಾರಿಯನ್ನು ತೆಗೆದುಕೊಂಡು ಅಚ್ಚುಕಟ್ಟಾಗಿ ಯೋಗ ದಿನವನ್ನು ಆಚರಿಸೋಣ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶ್ರುತಿ, ಆಯುಷ್ ಇಲಾಖೆ ಅಧಿಕಾರಿ ಡಾ.ಬಿ.ಪಿ.ಸತೀಶ್‌ಕುಮಾರ್, ಯೋಗ ಗುರುಗಳಾದ ನಿಜಗುಣ, ಶ್ರೀನಿವಾಸಮೂರ್ತಿ, ಅಜಿತ್ ಲಾಮೃತ, ಬಿ.ಪಿ.ಪ್ರಕಾಶ್, ಕುಮಾರಸ್ವಾಮಿ, ಚಂದ್ರಶೇಖರ್ ಇತರರು ಇದ್ದರು.