ಜಿಲ್ಲೆ

14ನೇ ಮಹಡಿಯಿಂದ ಜಿಗಿದು ಯುವಕ ಆತ್ಮಹತ್ಯೆ

ಮಂಗಳೂರು: ನಗರದ ಕೆಪಿಟಿ ವೃತ್ತದ ಬಳಿ ಇರುವ ಎಸ್‌ಕೆಎಸ್ ಪ್ಲಾನೆಟ್‌ನ 14ನೇ ಮಹಡಿಯಿಂದ ಜಿಗಿದು ಉದ್ಯಮಿಯೋರ್ವರ ಪುತ್ರ ಗುರುವಾರ ಬೆಳಗ್ಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಕಟ್ಟಡದ 14ನೇ ಮಹಡಿಯಲ್ಲಿರುವ 1405 ಸಂಖ್ಯೆಯ ಮನೆಯಲ್ಲಿ ವಾಸವಿರುವ ಉದ್ಯಮಿ ಅಬ್ದುಲ್ ಸಲೀಂ ಅವರ ಪುತ್ರ ಮಹಮ್ಮದ್ ಶಾಮಲ್ (21) ಆತ್ಮಹತ್ಯೆಗೆ ಶರಣಾದವರು. ಮಲಗಿದ್ದಲ್ಲಿಂದ ಮನೆಯವರಿಗೆ ಗೊತ್ತಾಗದಂತೆ ಎದ್ದು ಬಂದು ಬೆಳಗ್ಗೆ ಸುಮಾರು 4.45ರ ವೇಳೆಗೆ ಮಹಡಿಯಿಂದ ಜಿಗಿದಿದ್ದಾರೆ. ಪರಿಣಾಮ ತಲೆ ಛಿದ್ರಗೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಹಲವು ಸಮಯದಿಂದ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದ ಮಹಮ್ಮದ್ ಶಾಮಲ್ ಚಿಕಿತ್ಸೆ ಪಡೆದಿದ್ದರು. ಆದರೂ ಕಡಿಮೆಯಾಗದ ಕಾರಣ ಮಾನಸಿಕವಾಗಿ ನೊಂದು ಕೊಂಡಿದ್ದರು. ಖಿನ್ನತೆಯಿಂದ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನ ನಡೆಸಿದ್ದರು. ಆ ಬಳಿಕ ಮನೆಯವರು ಎಚ್ಚರಿಕೆಯಿಂದ ಈತನ ಮೇಲೆ ನಿಗಾ ಇಟ್ಟಿದ್ದರು. ಒಂದು ಬಾರಿ ಫ್ಯಾನ್‌ಗೆ ನೇಣು ಬಿಗಿದುಕೊಳ್ಳಲು ಯತ್ನಿಸಿ ಫ್ಯಾನ್ ಸಮೇತ ನೆಲಕ್ಕೆ ಬಿದ್ದು, ಅಪಾಯದಿಂದ ಪಾರಾಗಿದ್ದರು ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ತಿಳಿಸಿದ್ದಾರೆ.
ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನಗರದ ನಂತೂರು ಬಳಿ ಬುಧವಾರ ಎಸಿ ಟೆಕ್ನೀಷಿಯನ್ ಬಂಟ್ವಾಳ ಮಣಿಹಳ್ಳ ನಿವಾಸಿ ವಿನಯ್ ಜೋಯೆಲ್ ತಾವ್ರೊ (22) ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದರು. ಕದ್ರಿ ಠಾಣೆಯಲ್ಲಿ ಎರಡು ದಿನಗಳಲ್ಲಿ ಇಬ್ಬರು ಅಪಾರ್ಟ್‌ಮೆಂಟ್‌ನಿಂದ ಬಿದ್ದು ಮೃತಪಟ್ಟಂತಾಗಿದೆ.